ವಿದ್ಯಾರ್ಥಿ ಸಂಘದ ಚುನಾವಣೆಯಿಲ್ಲದ ಕ್ಯಾಂಪಸ್ ಮೌನವಾದರೆ, ಭವಿಷ್ಯತ್ತಿನ ರಾಜಕಾರಣ ದುರ್ಬಲವಾಗುತ್ತದೆ - ಅನ್ವಿತ್ ಕಟೀಲ್.
Wednesday, February 4, 2026
ಮಂಗಳೂರು:ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳು ಶಿಕ್ಷಣ ವ್ಯವಸ್ಥೆಯ ಅಂಚಿನ ವಿಷಯವಲ್ಲ. ಅವು ಪ್ರಜಾಸತ್ತಾತ್ಮಕ ಸಮಾಜದ ಮೂಲಭೂತ ಅಂಶ. ಕರ್ನಾಟಕ ಸರ್ಕಾರವು ರಾಜ್ಯದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ ಮುಂದಾಗಿರುವುದು, ವಿದ್ಯಾರ್ಥಿ ಸಮುದಾಯದ ರಾಜಕೀಯ-ಸಾಮಾಜಿಕ ಅಭಿವ್ಯಕ್ತಿಗೆ ಪುನಃ ಸಂಸ್ಥಾತ್ಮಕ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಯುವ ನಾಯಕ ಅನ್ವಿತ್ ಕಟೀಲ್ ಅವರು ಹೇಳಿದ್ದಾರೆ.ಮಾಧ್ಯಮದೊಂದಿಗೆ ಮಾತನಾಡಿದ ಅವರು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಈ ಪ್ರಕ್ರಿಯೆಯನ್ನು ಮತ್ತೆ ಚೈತನ್ಯಗೊಳಿಸುವುದು ಕೇವಲ ವಿದ್ಯಾರ್ಥಿಗಳ ಹಿತಕ್ಕಷ್ಟೇ ಸೀಮಿತವಲ್ಲ. ಅದು ರಾಜ್ಯದ ಮತ್ತು ದೇಶದ ಭವಿಷ್ಯದ ನಾಯಕತ್ವ ನಿರ್ಮಾಣದ ಪ್ರಶ್ನೆಯೂ ಹೌದು ಎಂದರು.
ಭಾರತದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ವಿದ್ಯಾರ್ಥಿ ರಾಜಕಾರಣವು ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ದಾರಿ ತೋರಿದ ಅನೇಕ ಉದಾಹರಣೆಗಳು ಸಿಗುತ್ತವೆ. ದೇಶ ಕಂಡ ಅತ್ಯುತ್ತಮ ಸಂಸದೀಯ ಪಟು ಸೀತಾರಾಂ ಯೆಚೂರಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮೂಲಕ ಚಿಂತನಾ ರಾಜಕಾರಣದ ನೆಲೆಯಿಟ್ಟವರು. ಬಿಜೆಪಿಯ ಅರುಣ್ ಜೇಟ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದಾಗಲೇ ಸಂಘಟನೆ, ಸಂವಾದ ಮತ್ತು ರಾಜಕೀಯ ಸಮತೋಲನದ ಪಾಠ ಕಲಿತವರು. ಪ್ರಸ್ತುತ ದೇಶದ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಕೂಡ ದೆಹಲಿ ವಿವಿಯಲ್ಲಿ ತಮ್ಮ ಚುನಾವಣಾ ರಾಜಕೀಯದ ಮೊದಲ ಪಾಠ ಕಲಿತವರು. ಪ್ರಕಾಶ್ ಕಾರಟ್, ನಿತಿನ್ ಗಡ್ಕರಿ, ಲಾಲು ಪ್ರಸಾದ್ ಯಾದವ್, ನವೀನ್ ಪಟ್ನಾಯಕ್, ಪಿ.ಚಿದಂಬರಂ, ಜೈ ರಾಂ ರಮೇಶ್,ಕಪಿಲ್ ಸಿಬಲ್, ಬಿ.ಕೆ.ಹರಿಪ್ರಸಾದ್ ಅಂತಹ ಈ ಹೆಸರುಗಳ ಹಿಂದೆಯೂ ವಿದ್ಯಾರ್ಥಿ ರಾಜಕಾರಣದ ಅನುಭವ ಅಡಗಿದೆ ಎಂದರು.
ಈ ನಾಯಕರು ಕ್ಯಾಂಪಸ್ ರಾಜಕಾರಣವನ್ನು ಕೇವಲ ಅಧಿಕಾರದ ಮೆಟ್ಟಿಲಾಗಿ ಬಳಸಿಲ್ಲ.ಅದನ್ನು ವಿಚಾರಧಾರಾತ್ಮಕ ಚಿಂತನೆಗೆ ಪೂರಕವಾದ ವೇದಿಕೆಯಾಗಿಸಿಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿ ಸಂಘಟನೆಗಳು ನಾಯಕತ್ವದ ತಾತ್ಕಾಲಿಕ ಪ್ರಯೋಗಾಲಯವಲ್ಲ, ದೀರ್ಘಕಾಲೀನ ಚಿಂತನೆಯ ಪಾಠಶಾಲೆಗಳಾಗಿವೆ.
ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳು ಕಳೆದ ಒಂದು-ಎರಡು ದಶಕಗಳಿಂದ ಬಹುತೇಕ ಸ್ಥಗಿತಗೊಂಡಿದೆ. ಕೆಲವೆಡೆ ಕಾನೂನು-ಸುವ್ಯವಸ್ಥೆಯ ಹೆಸರಿನಲ್ಲಿ, ಇನ್ನೂ ಕೆಲವೆಡೆ ರಾಜಕೀಯ ಹಸ್ತಕ್ಷೇಪದ ಭೀತಿಯಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕತೆಯೇ ಬಲಿಯಾಗಿರುವುದು ವಾಸ್ತವ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಸಮಸ್ಯೆಗಳು ವೈಯಕ್ತಿಕ ಅಸಮಾಧಾನಗಳಾಗಿ ಉಳಿದು, ಸಂಘಟಿತ ಧ್ವನಿಯಾಗಿ ರೂಪುಗೊಳ್ಳಲಿಲ್ಲ ಎಂಬುದು ನಿರ್ವಿವಾದ. ವಿದ್ಯಾರ್ಥಿ ಸಂಘದ ಚುನಾವಣೆಗಳಿಲ್ಲದೇ ಕ್ಯಾಂಪಸ್‌ಗಳು ರಾಜಕೀಯವಾಗಿ ನಿಷ್ಕ್ರಿಯವಾದವು. ಪ್ರಶ್ನಿಸುವ ಮನೋಭಾವ ಕುಂಠಿತವಾಯಿತು. ಆಡಳಿತ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ಕ್ಷೀಣಿಸಿತು. ಇದು ಆರೋಗ್ಯಕರ ಶೈಕ್ಷಣಿಕ ವಾತಾವರಣದ ಸೂಚಕವಲ್ಲದರೆ ಅತಿಶಯೋಕ್ತಿಯಾಗಲಾರದು ಎಂದರು.
ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳ ವಿರುದ್ಧ ಸಾಮಾನ್ಯವಾಗಿ ಕೇಳಿಬರುವ ವಾದವೆಂದರೆ ಗೊಂದಲ, ಹಿಂಸಾಚಾರ ಮತ್ತು ಪಕ್ಷ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದು. ಆದರೆ ಸಮಸ್ಯೆ ಚುನಾವಣೆಗಳಲ್ಲ. ಅವುಗಳನ್ನು ನಡೆಸುವ ವಿಧಾನದಲ್ಲಿದೆ. ವಿದ್ಯಾರ್ಥಿ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವದಲ್ಲೇ ಹೇಳುವುದಾದರೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಚುನಾವಣೆಗಳು ಇಂದಿಗೂ ತಮ್ಮ ಘನತೆಯುತವಾಗಿಯೂ, ನಿಯಮಬದ್ಧವಾಗಿಯೂ ಹಾಗೂ ವಿಚಾರಧಾರಿತವಾಗಿಯೂ ಚುನಾವಣೆಗಳು ನಡೆಯಲು ಸಾಧ್ಯವಾಗಿರುವುದನ್ನ ಮರೆಮಾಚಲು ಸಾಧ್ಯವಿಲ್ಲ.
ವಿದ್ಯಾರ್ಥಿಗಳು ನಾಳೆಯ ಶಾಸಕರು, ಸಚಿವರು ಅಥವಾ ಅಧಿಕಾರಿಗಳಾಗಬೇಕೆಂಬುದು ಅನಿವಾರ್ಯವಲ್ಲ. ಆದರೆ ಅವರು ಜವಾಬ್ದಾರಿಯುತ ನಾಗರಿಕರಾಗಬೇಕೆಂಬುದು ಅನಿವಾರ್ಯ. ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳು ಯುವಜನತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅನುಭವದ ಮೂಲಕ ಕಲಿಸುತ್ತವೆ. ಮುಕ್ತ ಸಂವಾದ ಚಿಂಥನ-ಮಂಥನಾ, ವಾದ-ಪ್ರತಿವಾದ, ಗಂಭೀರ ಚರ್ಚೆಗಳು, ಮತದಾನ, ವಿರೋಧ, ಒಪ್ಪಂದ, ಹೊಣೆಗಾರಿಕೆ ಈ ಪ್ರಕ್ರಿಯೆಯಿಂದ ಹೊರಬರುವ ನಾಯಕತ್ವವು ತಕ್ಷಣ ರಾಜಕೀಯದಲ್ಲಿ ಕಾಣಿಸಿಕೊಳ್ಳದಿದ್ದರೂ, ದೀರ್ಘಾವಧಿಯಲ್ಲಿ ರಾಜ್ಯದ ಸಾಮಾಜಿಕ-ರಾಜಕೀಯ ಸಂಸ್ಕೃತಿಗೆ ಬಲ ತುಂಬುತ್ತದೆ. ಕರ್ನಾಟಕದಂತಹ ಚಿಂತನಾ ಪರಂಪರೆ ಹೊಂದಿರುವ ರಾಜ್ಯದಲ್ಲಿ, ಕ್ಯಾಂಪಸ್‌ಗಳು ಮೌನವಾಗಿರುವುದು ಅಪಾಯಕರ. ಅವು ಚಿಂತನೆಯ ಕೇಂದ್ರಗಳಾಗಿ ಹೊರ ಹೊಮ್ಮಬೇಕಾಗಿದೆ ಎಂದರು.
ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯ ಪಕ್ಷಗಳ ನೆರಳುಗಳಾಗಿ ರೂಪಿಸುವ ಪ್ರಯತ್ನಗಳು ಈ ಪ್ರಕ್ರಿಯೆಗೆ ಧಕ್ಕೆ ತರುಬಹುದಾದರೂ ಅದನ್ನು ಎಚ್ಚರಿಕೆಯಿಂದಲೇ ನಿಭಾಯಿಸಬೇಕಿದೆ. ವಿದ್ಯಾರ್ಥಿ ರಾಜಕಾರಣವು ಪಕ್ಷ ರಾಜಕಾರಣದ ವಿಸ್ತರಣೆ ಆಗದೆ.ಸ್ವತಂತ್ರ ಚಿಂತನೆಯ ವೇದಿಕೆಯಾಗಬೇಕು, ಹಾಗೂ ವಿಚಾರಾಧಾರಿತ ವಿದ್ಯಾರ್ಥಿ ರಾಜಕಾರಣವಾಗಬೇಕಿದೆ. ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳು ಅಲ್ಪಕಾಲೀನ ಗೊಂದಲಕ್ಕಿಂತ ದೀರ್ಘಕಾಲೀನ ಲಾಭವನ್ನು ಹೊಂದಿವೆ. ಅವು ಪ್ರಜಾಸತ್ತಾತ್ಮಕ ಸಮಾಜದ ಹೂಡಿಕೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವೂ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕೂಡ ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ನಡೆಸುತ್ತೇವೆ ಎಂದು ಘೋಷಿಸಿದ್ದವು.
ಕ್ಯಾಂಪಸ್‌ಗಳಲ್ಲಿ ಪ್ರಜಾಸತ್ತಾತ್ಮಕ ಸಂವಾದ ಬಲವಾದರೆ, ರಾಜ್ಯದ ಮತ್ತು ರಾಷ್ಟ್ರದ ನಾಯಕತ್ವವೂ ಹೆಚ್ಚು ಸಂವೇದನಾಶೀಲವಾಗುತ್ತದೆ. ಇದು ಇತಿಹಾಸ ಹೇಳುವ ಸತ್ಯ. ಇದು ಭವಿಷ್ಯ ಸೂಚಿಸುವ ದಿಕ್ಕು ಎಂದು ಭಾವಿಸಬೇಕಿದೆ ಎಂದು ಹೇಳಿದರು.