ಶಿಕ್ಷಣ ಸಂಸ್ಕಾರದಿಂದ ಸಮಾಜದ ರೂಪಾಂತರ ಸಾಧ್ಯ – ಡಾ.ಹರಿಕೃಷ್ಣ ಪುನರೂರು
Saturday, January 10, 2026
ಮೂಲ್ಕಿ:ಪುನರೂರು ಪ್ರತಿಷ್ಠಾನದ ಉಪಸಮಿತಿ ಜನ ವಿಕಾಸ ಸಮಿತಿ ಮೂಲ್ಕಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಸಮಾಜಸೇವೆ ಎಂದರೆ ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಅಗತ್ಯವಿರುವ ಪ್ರತಿಯೊಬ್ಬರ ಬದುಕಿಗೆ ಸ್ಪಂದಿಸುವ ಸೇವಾಭಾವನೆಯಾಗಬೇಕು. ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯಗಳು ಸಮಾಜವನ್ನು ಬಲಪಡಿಸುತ್ತವೆ. ಯುವಜನರು ಸಂಘಟಿತರಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸುರೇಶ್ ಪಿ. ಎಸ್., ಉಪಾಧ್ಯಕ್ಷೆ ಗೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ಅಂಗರಗುಡ್ಡೆ, ಕಾರ್ಯದರ್ಶಿ ಶೋಭಾ ರಾವ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಕ್ಷತಾ ಶೆಟ್ಟಿ, ಪ್ರಾಣೇಶ್ ಭಟ್ ದೇಂದಡ್ಕ, ಶಶಿಕರ ಕೆರೆಕಾಡು, ದಾಮೋದರ ಶೆಟ್ಟಿ ಕೊಡೆತ್ತೂರು ಹಾಗೂ ಆನಂದ ಮೇಲಾಂಟ ರವರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಶಾರದಾ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ಹೆಜಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.