ಯುವಜನತೆ ತಮ್ಮ ಸಾಮರ್ಥ್ಯವನ್ನು ಅರಿತು ದೇಶಸೇವೆಗೆ ಮುಂದಾಗಬೇಕು: ಉಮೇಶ್ ನೀಲಾವರ
Tuesday, January 13, 2026
ಮೂಲ್ಕಿ:ಸ್ವಾಮೀ ವಿವೇಕಾನಂದರು ಭಾರತೀಯ ಸಂಸ್ಕೃತಿ ಹಾಗೂ ಯುವಶಕ್ತಿಗೆ ಹೊಸ ಚೈತನ್ಯ ತುಂಬಿದ ಮಹಾನ್ ಚಿಂತಕರಾಗಿದ್ದರು. ಶಿಸ್ತು, ಆತ್ಮವಿಶ್ವಾಸ ಮತ್ತು ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಜೀವನ ಸಾಧ್ಯವೆಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲಾ ಸಹ ಶಿಕ್ಷಕ ಉಮೇಶ್ ನೀಲಾವರ ಎಂದು ಹೇಳಿದರು.
ಅವರು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮುಲ್ಕಿ ಇದರ ಸಹಕಾರದೊಂದಿಗೆ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ನಲ್ಲಿ ವಿವೇಕಾನಂದರ ಜನ್ಮತಿಥಿಯ ಅಂಗವಾಗಿ ಆಯೋಜಿಸಿದ ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.
ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ವಾಸುದೇವ ಬೆಳ್ಳೆ ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಧರ್ಮ ಎಂದರೆ ಕೇವಲ ಆಚರಣೆ ಅಲ್ಲ, ಮಾನವೀಯತೆ ಮತ್ತು ಸೇವಾಭಾವನೆಯೇ ನಿಜವಾದ ಧರ್ಮ ಎಂದು ವಿವೇಕಾನಂದರು ಸಾರಿದ್ದನ್ನು ಅವರು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಿವೇಕಾನಂದರ ಸಂದೇಶವು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶಕವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನವಿಕಾಸ ಸಮಿತಿ ಮುಲ್ಕಿಯ ಅಧ್ಯಕ್ಷ ಸುರೇಶ್ ಪಿ. ಎಸ್, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಕಾರ್ಯದರ್ಶಿ ಶೋಭಾ ರಾವ್, ಸದಸ್ಯರಾದ ಶಶಿಕರ ಕೆರೆಕಾಡು, ಪ್ರಾಣೇಶ್ ಭಟ್ ದೇಂದಡ್ಕ, ಅಕ್ಷತಾ ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಜನವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ವಂದಿಸಿದರು, ಶಾಲಾ ಪ್ರಾಚಾರ್ಯ ಜಿತೇಂದ್ರ ವಿ ರಾವ್ ಹೆಜಮಾಡಿ ನಿರೂಪಿಸಿದರು.