ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಸ್ಥರ ಸಭೆ
Sunday, January 18, 2026
ಕಿನ್ನಿಗೋಳಿ : ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸೇರಿದ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಶ್ರೀ ದೈವದ ಅಪ್ಪಣೆ ಪ್ರಕಾರ ದೈವಸ್ಥಾನದಲ್ಲಿ ಇರುವ ವ್ಯತ್ಯಾಸದ ಬಗ್ಗೆ ಪ್ರಶ್ನಾ ಚಿಂತನೆ ನಡೆಸುವ ಬಗ್ಗೆ ಭಾನುವಾರ ಶ್ರೀಕ್ಷೇತ್ರದ ರಾಜಗೋಪುರದಲ್ಲಿ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಸ್ಥರ ಸಭೆ ನಡೆಯಿತು.ಶ್ರೀ ಕ್ಷೇತ್ರದಲ್ಲಿರುವ ವ್ಯತ್ಯಾಸವನ್ನು ಸರಿಪಡಿಸಬೇಕು.ಈ ನಿಟ್ಟಿನಲ್ಲಿ ಅಷ್ಟಮಂಗಳ ಪ್ರಶ್ನೆ ಇಡುವುದಾಗಿ ನಿರ್ಣಯಿಸಿ ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಲಾಯಿತು. ಗ್ರಾಮಸ್ಥರ ಅಭಿಪ್ರಾಯದಂತೆ ಮುಂದಿನ ದಿನಗಳಲ್ಲಿ ಸಮಿತಿಯ ಸಭೆ ನಡೆಸಿ ದೈವಜ್ಞರನ್ನು ಗೊತ್ತುಪಡಿಸಿ, ದಿನಾಂಕ ನಿಗದಿಪಡಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಸಂದರ್ಭ ದೈವಸ್ಥಾನದ ಸಂಬಂಧಪಟ್ಟ ಪದಾಧಿಕಾರಿಗಳು, ಅತ್ತೂರು, ಕೆಮ್ರಾಲ್, ಕಿಲೆಂಜೂರು ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.