ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ ನಲ್ಲಿ ಬ್ರಹ್ಮಕಲಶೋತ್ಸವ, ವಿವಿಧ ಸಮಿತಿಗಳ ಸಮಾಲೋಚನೆ ಸಭೆ
Tuesday, November 25, 2025
ಹಳೆಯಂಗಡಿ:ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ ನಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಈ ಹಿನ್ನೆಲೆಯಲ್ಲಿ 30 ವಿವಿಧ ಸಮಿತಿಗಳ ಸಮಾಲೋಚನೆ ಸಭೆಯು ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಸಿಹಿತ್ಲು ಬ್ರಹ್ಮಕಲಶೋತ್ಸವ ಅತ್ಯಂತ ವ್ಯವಸ್ಥಿತವಾಗಿ ನಡೆದು ಕಟೀಲು ಬ್ರಹ್ಮಕಲಶೋತ್ಸವದಂತೆ ಮಾದರಿ ಆಗಬೇಕು. ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಬೇಕು.ಧನಸಂಗ್ರಹಕ್ಕೆ ಹೊಸ ಪರಿಕಲ್ಪನೆ ಬಗ್ಗೆ ಆಲೋಚಿಸಬೇಕು. ಪ್ರಚಾರದ ಫ್ಲೆಕ್ಸ್‌ನಲ್ಲಿ ಏಕರೂಪದ ಲಾಂಛನ ಇರಬೇಕು. ವ್ಯಕ್ತಿಗಳ ಹೆಸರು ಸಾಕು, ಫೊಟೊ ಹಾಕುವುದು ಬೇಡ. ಎಲ್ಲ ಸಮಿತಿಗಳೂ ಜ.15 ರ ಒಳಗೆ ಎಲ್ಲವೂ ಕಾರ್ಯಯೋಜನೆ ಅಂತಿಮಗೊಳಿಸಬೇಕು ಎಂದರು.
ಸಭೆಯಲ್ಲಿ ಸ್ವಾಗತ ಸಮಿತಿ, ಅನ್ನಸಂತರ್ಪಣೆ, ಸುರಕ್ಷತೆ, ಪ್ರಚಾರ ಸಮಿತಿ ಸೇರಿದಂತೆ 30 ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಜವಬ್ದಾರಿ ಹಂಚಿಕೆ ಮಾಡಲಾಯಿತು.
ಈ ಸಂದರ್ಭ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ದಿವಾಕರ ಸಾಮಾನಿ, ಸುನಿಲ್ ಆಳ್ವ, ಈಶ್ವರ ಕಟೀಲ್, ಸೋಂದಾ ಭಾಸ್ಕರ್ ಭಟ್, ಸದಾಶಿವ ಶೆಟ್ಟಿ ಮುರ, ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಬೆಲ್ಚಡ ಆದಿ ಉಡುಪಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಾಮನ್ ಇಡ್ಯಾ ಸ್ವಾಗತಿಸಿದರು.
ರಾಜೇಂದ್ರ ಪ್ರಸಾದ್ ಎಕ್ಕಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ವಂದಿಸಿದರು.
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸದ ನೆನಪಿಗಾಗಿ ಭೂದಾನ ಸೇವಾ ಯೋಜನೆ ಆರಂಭಿಸಲಾಗಿದೆ. ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು
2 ಎಕರೆ ಜಾಗ ಖರೀದಿಗೆ 5-6 ಕೋಟಿ ರೂ.ಅಂದಾಜು ಆಗುವ ನಿರೀಕ್ಷೆ ಹೀಗಾಗಿ ಭೂ ದಾನ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಿವಿಧ ವಿಭಾಗಳಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.