ಕಟೀಲಿನಲ್ಲಿ ವೈಭವದ ಮೊಸರುಕುಡಿಕೆ ಉತ್ಸವ, ಅಷ್ಟಮಿ ಆಟ
Tuesday, September 16, 2025
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ಪ್ರತಿಷ್ಟೆಗೊಂಡು ಆರಾಧಿಸಲ್ಪಟ್ಟ ಮೃಣ್ಮಯ ಕೃಷ್ಣನನ್ನು ಸೋಮವಾರ ರಥಬೀದಿಯಿಂದ ಅಜಾರುವರೆಗೆ ಚಂದ್ರಮಂಡಲ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಭಾನುವಾರ ಸಂಜೆ ನಂದಿನಿ ನದಿಯಲ್ಲಿ ಮೂರ್ತಿಯನ್ನು ವಿಸರ್ಜಿಸುವುದರೊಂದಿಗೆ ಮೊಸರುಕುಡಿಕೆ ಉತ್ಸವ ವೈಭವದಿಂದ ನಡೆಯಿತು.
ಭಾನುವಾರ ರಾತ್ರಿ ಕೃಷ್ಣಾಷ್ಟಮಿ ಪ್ರಯುಕ್ತ ತಾಳಮದ್ದಲೆ, ಕೃಷ್ಣದೇವರಿಗೆ ಪೂಜೆ, ಅರ್ಘ್ಯ ಪ್ರದಾನ ನಡೆಯಿತು. ಸೋಮವಾರ ರಥಬೀದಿಯಲ್ಲಿ ಮಧ್ಯಾಹ್ನ ಕೃಷ್ಣನ ಚಿತ್ರಬಿಡಿಸುವುದು, ಕೃಷ್ಣನ ನಾನಾ ಹೆಸರು ಹೇಳುವುದು, ಸಂಗೀತ ಸ್ಪರ್ಧೆ, ಹಗ್ಗಜಗ್ಗಾಟ, ಮಡಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳು ನಡೆದವು. ಎಣ್ಣೆ ಹಚ್ಚಿದ ಅಡಕೆ ಮರವನ್ನು ರಾಬಿನ್ ಸತತ ೧೬ನೇ ವರ್ಷ ಹತ್ತಿ ನಗದು ಬಹಮಾನ ಗೆದ್ದರು.
ಸಿಂಹ ಹುಲಿ ವಿವಿಧ ವೇಷಗಳು, ವಾದ್ಯ, ಕುಣಿತ ಭಜನೆಗಳೊಂದಿಗೆ ಕೃಷ್ಣದೇವರನ್ನು ಚಂದ್ರಮಂಡಲ ರಥದಲ್ಲಿ ಅಜಾರುವರೆಗೆ ಕೊಂಡೊಯ್ದು, ರಥಬೀದಿಯಲ್ಲಿ ಎಲ್ಲ ವೇಷಗಳು ದೇವರ ಎದುರು ಕುಣಿದ ಬಳಿಕ, ನಂದನಿ ನದಿಯಲ್ಲಿ ಮಣ್ಣಿನಮೂರ್ತಿಯನ್ನು ವಿಸರ್ಜಿಸಲಾಯಿತು. ಸಹಸ್ರಾರು ಮಂದಿ ಭಕ್ತರಿಗೆ ಚಕ್ಕುಲಿ, ಲಡ್ಡು, ಪಂಚಕಜ್ಜಾಯ ಪ್ರಸಾದ ವಿತರಿಸಲಾಯಿತು.
ಅಷ್ಟಮಿ ಆಟ
ಕಟೀಲು ಮೇಳದ ಆರೂ ಮೇಳಗಳ ದೇವರಿಗೆ ಪೂಜೆ ನಡೆದು, ಒಂದೇ ರಂಗಸ್ಥಳಕ್ಕೆ ಆಗಮಿಸಿ, ಕಟೀಲು ಮೇಳದ ಕಲಾವಿದರಿಂದ ಕೃಷ್ಣ ಜನ್ಮ, ಸುಭದ್ರಕಲ್ಯಾಣ, ಕೃಷ್ಣಾರ್ಜುನ, ಕರ್ನಾರ್ಜುನ, ರತಿಕಲ್ಯಾಣ ಪ್ರಸಂಗಗಳು ರಾತ್ರಿಯಿಡೀ ಪ್ರದರ್ಶನಗೊಂಡವು.