ಜು.24:ಯುಗಪುರುಷ ಸಂಸ್ಥಾಪಕ ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ
Wednesday, July 23, 2025
ಕಿನ್ನಿಗೋಳಿ: 78ನೇ ವರ್ಷಾಚರಣೆಯಲ್ಲಿರುವ "ಯುಗಪುರುಷ"ದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ, ವಿದ್ಯಾರ್ಥಿವೇತನ ವಿತರಣೆಯು ಜುಲೈ 24ರಂದು ಸಂಜೆ 4-30ಕ್ಕೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಲಿರುವರು. ಹಿರಿಯ ಸಂಶೊಧಕರಾದ ಡಾ| ಪುಂಡಿಕಾ ಗಣಪಯ್ಯ ಭಟ್‌ರವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಡಾ| ಬಿ. ಪ್ರಭಾಕರ ಶಿಶಿಲ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಹಾಗೂ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಗುವುದು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ರೇಖಾ ಸುದೇಶ್ ರಚಿತ ಅಧಮ್ಯ ಕೃತಿಯನ್ನು ಕರ್ಣಾಟಕ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಇವರು ಬಿಡುಗಡೆಗೊಳಿಸಿ ಶುಭಾಶಂಸನೆಗೈಯಲಿರುವರು. ಕಿನ್ನಿಗೋಳಿ ಅನುಗ್ರಹ ಜ್ಯುವೆಲ್ಲರ್‍ಸ್‌ನ ಪೃಥ್ವಿರಾಜ್ ಆಚಾರ್ಯ ಇವರು ವಿದ್ಯಾರ್ಥಿವೇತನ ವಿತರಣೆ ಮಾಡಲಿರುವರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಪಿ.ವಿ.ಪ್ರದೀಪಕುಮಾರ್, ಮೋಹನದಾಸ ಸುರತ್ಕಲ್, ಡಾ| ನಯನಾಭಿರಾಮ ಉಡುಪ ಇವರುಗಳು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀ ವಿನಾಯಕ ಮೇಳ (ರಿ.) ಕೆರೆಕಾಡು ಮೂಲ್ಕಿ ಇವರಿಂದ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.