ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಜಪೆ - ಎಡಪದವು ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿ ಕಾರ್ಯಕ್ರಮ
Saturday, July 5, 2025
ಬಜಪೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಜಪೆ - ಎಡಪದವು ಘಟಕದ ವತಿಯಿಂದ ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ
ಪರಿಸರ ಮಾಹಿತಿ ಕಾರ್ಯಕ್ರಮವು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಜೆ ಅವರು ಸ್ವಚ್ಛ ಪರಿಸರ ನಿರ್ಮಾಣ, ಸಮುದಾಯದ ಆರೋಗ್ಯ, ಸಂರಕ್ಷಣೆ ಮತ್ತು ಘನ ತ್ಯಾಜ್ಯ ವಿಲೇವಾರಿ ಕಡೆಗೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀಮತಿ ಶ್ಯಾಮಲಾ ಅವರು ಮಾತನಾಡಿ ಪರಿಸರ ದೇವರ ಸೃಷ್ಠಿ.ಪುರಾತನ ಕಾಲದಿಂದಲೂ ಸಮೃದ್ದವಾಗಿರುವ ಪರಿಸರ ಇವತ್ತು ವಿನಾಶದ ಅಂಚಿನತ್ತ ಸಾಗುತ್ತಿದೆ.ಭವಿಷ್ಯದ ಪರಿಸರ ನಿರ್ಮಾಣ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಐತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಜಾಗೃತಿಯ ಅವಶ್ಯಕತೆ ಹಾಗೂ ಪರಿಸರ ಉಳಿಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದರು. ಈ ವೇಳೆ ವಿವಿಧ ಪರಿಸರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಬಾಬು ಪಿ.ಎಂ. ಅವರು ಮನೆ ಮತ್ತು ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕುಪ್ಪೆಪದವು ಒಕ್ಕೂಟದ ಅಧ್ಯಕ್ಷ ಹರೀಶ್ ನಾಯ್ಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.
ಶಿಕ್ಷಕ ಮಾರ್ಕ್ ಮೆಂಡೊನ್ಸಾ ಸ್ವಾಗತಿಸಿದರು. ಮೇಲ್ವಿಚಾರಕಿ ಶ್ರೀಮತಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಉದಯ ಕುಮಾರ್ ರವರು ವಂದಿಸಿದರು.