ಯಕ್ಷಗಾನವು ದೈಹಿಕ ವ್ಯಾಯಾಮವನ್ನು ಹೆಚ್ಚಿಸುತ್ತದೆ - ಗಿರೀಶ್ ಎಂ.ಶೆಟ್ಟಿ ಕಟೀಲು
Saturday, July 5, 2025
ಬಜಪೆ:ಯಕ್ಷ ಶಿಕ್ಷಣವು ವಿದ್ಯಾರ್ಥಿಗಳಿಗೆ ಮೊಳಕೆಯಿಂದಲೇ ಲಭ್ಯವಾದರೆ ಅದು ಹೆಮ್ಮರವಾಗಿ ಬಹುಕಾಲ ಉಳಿಯುತ್ತದೆ. ಲಕ್ಷಾಂತರ ಜನರು ಯಕ್ಷಗಾನ ಕಲೆಯ ಅಭಿಮಾನಿಗಳು ಅದರ ಸೇವೆಯ ಆರಾಧಕರು ಯಕ್ಷಗಾನದಲ್ಲಿ ಅರ್ಥಗಾರಿಕೆ ಮಾತುಗಾರಿಕೆ ಮೊದಲಾದ ನೀತಿ ನಿಯಮಗಳಿವೆ. ಶಿಕ್ಷಣ ರಂಗದಲ್ಲಿ ನೀಡುವ ಶಿಸ್ತಿನ ಜೊತೆಗೆ ಯಕ್ಷಗಾನವು ದೈಹಿಕ ವ್ಯಾಯಾಮವನ್ನು ಹೆಚ್ಚಿಸುತ್ತದೆ ಇದರಿಂದ ಕಲಿಕೆಯಲ್ಲಿ ಏಕಾಗ್ರತೆ ಶಿಸ್ತು ಸ್ಮರಣೆ ಹೆಚ್ಚಾಗುತ್ತದೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ ನ ಕಟೀಲು - ಎಕ್ಕಾರು ಘಟಕದ ಅಧ್ಯಕ್ಷ ಗಿರೀಶ್ ಎಂ ಶೆಟ್ಟಿ ಹೇಳಿದರು.ಅವರು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಟೀಲು - ಎಕ್ಕಾರು ಘಟಕದ ನೇತೃತ್ವದಲ್ಲಿ ನಡೆದ ಯಕ್ಷಧ್ರುವ - ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಅನೇಕ ಕಲಾವಿದರು ಶಿಕ್ಷಣ ಸಂಸ್ಥೆಗಳು ಇದರಿಂದ ಸಹಾಯವನ್ನು ಪಡೆದುಕೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಆದ್ದರಿಂದ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಗೆ ಬಹು ಅಗತ್ಯ ಎಂದರು.
ಯಕ್ಷಗಾನ ಜ್ಞಾನ ವೃದ್ಧಿಸುವ ಕಲೆಯಾಗಿ ಸಾಂಸ್ಕೃತಿಕ ಸಾಂಪ್ರದಾಯಿಕ ಪರಂಪರೆಯಾಗಿ ,ಬದುಕಿಗೆ ವೃತ್ತಿ ಮತ್ತು ಪ್ರವೃತ್ತಿಯ ಶಕ್ತಿಯಾಗಿ, ನಮ್ಮ ಇರುವಿಕೆಯ ಬದುಕಿನ ತೇಜಸ್ಸನ್ನು ಹೆಚ್ಚಿಸಲು ಸಹಕಾರಿ .ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಬೆಳೆಸುವ ಕಲೆಯಾಗಿ ಸಾಂಸ್ಕೃತಿಕ ಮೌಲ್ಯ ವರ್ಧಿಸುವ ಮುಂದುವರಿಕೆಯಾಗಿ ಬೆಳೆದು ಬಂದಿರುವ ಯಕ್ಷಗಾನ ಕಲಿಕೆಯು ವಿದ್ಯಾರ್ಥಿ ಜೀವನದಲ್ಲಿ ಬಹು ಅಗತ್ಯ ಪ್ರಸ್ತುತ ಸುಮಾರು 85ಕ್ಕಿಂತಲೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ 6,000 ವಿದ್ಯಾರ್ಥಿಗಳು ಯಕ್ಷ ಶಿಕ್ಷಣದ ಪ್ರಯೋಜನವನ್ನು ಪಡೆದು ಸಾಂಸ್ಕೃತಿಕ ರಂಗದ ರೂವಾರಿಗಳಾಗಿ ಮುಂದುವರೆಯುತ್ತಿರುವುದು ಇದರ ಯಶಸ್ಸಾಗಿದೆ ಎಂದರು.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿವೃತ್ತ ಪ್ರಬಂಧಕ ರತ್ನಾಕರ ಶೆಟ್ಟಿ ಮಾತನಾಡಿ ಯಕ್ಷಗಾನವನ್ನು ಜೀವನದ ಪ್ರೀತಿಯ ಕಲೆಯಾಗಿ ಆರಾಧಿಸುತ್ತಾ ಅದರಲ್ಲೇ ಸಾಧನೆಗೈಯುತ್ತಿರುವ ಯಕ್ಷದ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರ ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಶಾಲಾ ಶಿಕ್ಷಣದಲ್ಲಿ ಯಕ್ಷ ಶಿಕ್ಷಣವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಸಮರ್ಥ ಗುರುಗಳ ಮಾರ್ಗದರ್ಶನದಲ್ಲಿ ನೀಡುತ್ತಾ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಾಂಸ್ಕೃತಿಕ ಮೌಲ್ಯ ವರ್ಧನೆಯಾಗುವಲ್ಲಿ ನಮ್ಮ ಪರಂಪರೆ ಉಳಿಸಿ ಬೆಳೆಸುವಲ್ಲಿ ನಡೆಸುವ ಕಾರ್ಯ ಬಹಳ ಅಭಿನಂದನಾರ್ಹ. ಅಲ್ಲದೆ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈಯುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕದ ಅಧ್ಯಕ್ಷ ಗಿರೀಶ್ ಎಂ.ಶೆಟ್ಟಿ ಕಟೀಲು, ಪ್ರಧಾನ ಸಂಚಾಲಕರಾದ ನಿತೇಶ್ ಶೆಟ್ಟಿ,ಸಂಚಾಲ ಸತೀಶ್ ಶೆಟ್ಟಿ , ಯಕ್ಷ ಶಿಕ್ಷಣದ ಗುರು ರಾಮಪ್ರಕಾಶ್ ಕಲ್ಲೂರಾಯ, ಸುರೇಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರ ಎನ್ ರಾವ್, ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಕ್ಷ ಶಿಕ್ಷಣದ ನೋಡಲ್ ಶಿಕ್ಷಕ ಡಾ. ಅನಿತ್ ಕುಮಾರ್ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಗೌರಿ ವಂದಿಸಿದರು.ಶಿಕ್ಷಕಿ ಶ್ರೀಮತಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು.