ಕಟೀಲಿನಲ್ಲಿ ಅಂಚೆ ಇಲಾಖೆ ಪದೋನ್ನತಿ ಪರೀಕ್ಷೆಗೆ ಉಚಿತ ತರಬೇತಿ
Monday, June 9, 2025
ಕಟೀಲು : ಅಂಚೆ ಇಲಾಖೆ ಇವತ್ತು ಜನಸಾಮಾನ್ಯರಿಗೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ, ಇಂತಹ ಇಲಾಖೆಯಲ್ಲಿ ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯುತ್ತ ಇನ್ನಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಮಂಗಳೂರು ಆಕಾಂಕ್ಷಿ ತಂಡ ಆಯೋಜಿಸಿದ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಪದೋನ್ನತಿ ಪರೀಕ್ಷೆಗಳಿಗಾಗಿ ನಡೆಸಿದ ಎರಡು ದಿನಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ಶಾಲಾ ಉಪಪ್ರಾಚಾರ‍್ಯ ರಾಜಶೇಖರ ಎನ್. ಹಳೆ ವಿದ್ಯಾರ್ಥಿ ಸಂಘದ ಮಿಥುನ ಕೊಡೆತ್ತೂರು, ತರಬೇತುದಾರರಾದ ಶಿವಮೊಗ್ಗ ಅಂಚೆ ಇಲಾಖೆಯ ಧನಂಜಯ ಎಂ. ಗೌಡ, ಹುಬ್ಬಳ್ಳಿ ಅಂಚೆ ಇಲಾಖೆಯ ವೀರೇಶ್, ಸಂತೋಷ್ ಕುರಿಹುಲಿ ಮತ್ತಿತರರಿದ್ದರು.
ಸಮಾರೋಪ
ತರಬೇತಿಯ ಸಮಾರೋಪ ಸಮಾರಂಭದಲ್ಲಿ ಆಕಾಂಕ್ಷಿ ತಂಡದಿಂದ ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರೂ. 15 ಸಾವಿರ ದೇಣಿಗೆ ನೀಡಲಾಯಿತು. ಶಾರದಾ ವಿದ್ಯಾಲಯದ ಪ್ರಾಂಶುಪಾಲರಾದ ದಯಾನಂದ ಕಟೀಲ್, ಆಕಾಂಕ್ಷಿ ತಂಡದ ದಯಾನಂದ ಕತ್ತಲಸಾರ್, ಸುಭಾಸ್ ಪಿ.ಸಾಲಿಯಾನ್, ಕೇಶವ ಕಟೀಲ್, ಕೇಶವ ಕಜೆ, ಸುಜಾತಾ, ಉಮಾನಾಥ್ ಮತ್ತಿತರರಿದ್ದರು.
ಕುಮಟಾ, ಬೆಳಗಾಂ, ಪುತ್ತೂರು, ಉಡುಪಿ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಮಂದಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು.