ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು,ಶಾಲಾ ಪ್ರಾರಂಭೋತ್ಸವ
Tuesday, June 3, 2025
ಬಜಪೆ:ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು, ಮಂಗಳೂರು ಉತ್ತರ ವಲಯ ಇಲ್ಲಿ ಜೂನ್ 2 ರಂದು ಶಾಲಾ ಪ್ರಾರಂಭೋತ್ಸವ ನಡೆಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅಮೀನ್ ಶಾಲಾ ಪ್ರಾರಂಭೋತ್ಸವದ ಜಾಥಕ್ಕೆ ಚಾಲನೆ ನೀಡಿದರು. ಜಾಥಾವು ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದಿಂದ ಶಾಲೆಯ ತನಕ ನಡೆಯಿತು. ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮುದಾಯದ ಜನರಿಗೆ ಮನವರಕೆ ಮಾಡುವಲ್ಲಿ ವಿದ್ಯಾರ್ಥಿಗಳು ಘೋಷಣೆ ಗಳನ್ನು ಕೂಗುತ್ತಾ ಬ್ಯಾನರ್ ನ್ನು ಪ್ರದರ್ಶಿಸುತ್ತಾ ಜಾಥಾದಲ್ಲಿ ಸಾಗಿದರು. ನೂತನವಾಗಿ ಶಾಲೆಗೆ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಆರತಿ ಬೆಳಗಿಸಿ ಪುಷ್ಪಾರ್ಚನೆಯ ಮೂಲಕ ತಳಿರು ತೋರಣಗಳಿಂದ ಅಲಂಕೃತ ಶಾಲೆಯ ಪ್ರವೇಶ ದ್ವಾರದ ಬಳಿ ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲಾಯಿತು.
ಸರಕಾರದಿಂದ ದೊರೆತ ಸವಲತ್ತುಗಳಾದ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಸಾಂಕೇತಿಕವಾಗಿ ಮಕ್ಕಳಿಗೆ ಶಾಲಾಭಿಮಾನಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರು ವಿತರಿಸಿದರು.
ಎಸ್ ಡಿ ಎಂ ಸಿ ಸದಸ್ಯರು ನೂತನವಾಗಿ ಶಾಲೆಗೆ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ಲೇಖನಿಗಳನ್ನು ನೀಡಿದರು. ಶಾಲೆಯು ಎಸ್ ಎಸ್ ಎಲ್ ಸಿ ಯಲ್ಲಿ ನೂರು ಶೇಕಡ ಫಲಿತಾಂಶ ದಾಖಲಿಸಿದ್ದು, ಶಿಕ್ಷಕರಿಗೆ ಹೂಗುಚ್ಛಗಳನ್ನ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶ ಒಂದರ ಶಾಲೆ, ಖಾಸಗಿ ಶಾಲೆಗಳ ಮಧ್ಯದಲ್ಲಿಯೂ ಸರಕಾರಿ ಪ್ರೌಢಶಾಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹಾಗೂ ನಾವಿನ್ಯಯುತ ಚಟುವಟಿಕೆಗಳನ್ನು ನಡೆಸುವುದರ ಮೂಲಕ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಪ್ರಶಂಸಾರ್ಹ. ಗುಣಾತ್ಮಕ ಮೌಲ್ಯಾಧಾರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುವುದರ ಜೊತೆಗೆ ಶಿಸ್ತುಬದ್ಧ ವಿದ್ಯಾರ್ಥಿ ಜೀವನ ಭವಿಷ್ಯಕ್ಕೆ ಭದ್ರಬುನಾದಿ. ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಬದಲಾವಣೆಯ ಶಿಕ್ಷಣ ಬಹಳ ಅವಶ್ಯಕ. ಅದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ದೊರಕುತ್ತಿರುವುದು ಬಹು ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ರತನ್ ಶೆಟ್ಟಿ, ಹೇಮಂತ್ ಶೆಟ್ಟಿ, ಶ್ರೀಮತಿ ಶ್ಯಾಮಲ ಶ್ರೀಮತಿ ವಿನೋದ, ಶ್ರೀಮತಿ ಲತಾ ರಾವ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೆದರು.ಶಿಕ್ಷಕಿ ಶ್ರೀಮತಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ವಿದ್ಯಾ ಗೌರಿ ವಂದಿಸಿದರು.