ಪಾವಂಜೆ ದೇವಸ್ಥಾನದಲ್ಲಿ ಉದಯಾಸ್ತಮಾನ ಗಮಕ
Sunday, March 2, 2025
ಹಳೆಯಂಗಡಿ : ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಘಟಕವು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪಾವಂಜೆ ದೇಗುಲದ ಸಹಯೋಗದಲ್ಲಿ ಭಾನುವಾರ ದಿನವಿಡೀ ಉದಯಾಸ್ತಮಾನ ಗಮಕ ಕಾರ್ಯಕ್ರಮ ನಡೆಯಿತು.
ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ದೇಗುಲದ ವ್ಯವಸ್ಥಾಪನ ಸಮಿತಯ ಅಧ್ಯಕ್ಷ ವಿ.ಸೂರ್ಯಕುಮಾರ್, ಅರ್ಚಕರಾದ ಪಾವಂಜೆ ಕೃಷ್ಣ ಭಟ್ ಶುಭಹಾರೈಸಿದರು.
ದಕ್ಷಯಜ್ಞ, ವಿಶ್ವೇಶ್ವರ ಸಾಕ್ಷತ್ಕಾರ, ಪಾರ್ಥನಿಗೆ ಪಾಶುಪತಾಸ್ತ್ರ ಪ್ರದಾನ, ಕೋಳೂರ ಕೊಡಗೂಸು, ಗಣಪತಿಯಿಂದ ಆತ್ಮಲಿಂಗ ಪ್ರತಿಷ್ಟೆ, ಮಂಜುನಾಥ ವೈಭವ, ಗಿರಿಜಾ ಕಲ್ಯಾಣ ಆಖ್ಯಾನಗಳನ್ನು ಪ್ರಸ್ತುತಪಡಿಸಲಾಯಿತು.
ಡಾ. ಕೃಷ್ಣ ಭಟ್ ಸುಣ್ಣಂಗುಳಿ, ರಾಜಾರಾಮ ಹೊಳ್ಳ, ತೋನ್ಸೆ ಪುಷ್ಕಳ ಕುಮಾರ, ಶ್ರದ್ಧಾ ನಾಯರ್ಪಳ್ಳ, ಮೇಧಾ ಉಜಿರೆ, ರಘುಪತಿ ಭಟ್ಟ, ಡಾ. ಸಂತೋಷ ಆಳ್ವ, ಸುರೇಶ್ ಕುದ್ರೆತ್ತಾಯ, ಅಕ್ಷತಾ ಎನ್. ಶೆಟ್ಟಿ, ವೆಂಕಟರಮಣ ಭಟ್, ಸದಾಶಿವ ಆಳ್ವ ತಲಪಾಡಿ, ಸರ್ಪಂಗಳ ಈಶ್ವರ ಭಟ್, ಸುರೇಶ್ ರಾವ್ ಅತ್ತೂರು ವಾಚನ, ಆಖ್ಯಾನದಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೊಡೆತ್ತೂರು ವೇದವ್ಯಾಸ ಉಡುಪ, ಸಾಹಿತ್ಯದ ಒಲವು ಮೂಡಿಸಲು ಹಾಗೂ ಪುರಾಣ ಜ್ಞಾನವನ್ನು ಹೆಚ್ಚಿಸಲು ಗಮಕ ಕಲೆ ಉತ್ತಮವಾಗಿದ್ದು, ಮಂಗಳೂರು ತಾಲೂಕು ಗಮಕ ಕಲಾ ಪರಿಷತ್ತಿನ ಪ್ರಯತ್ನ ಅಭಿನಂದನೀಯ ಎಂದರು. ಗಮಕ ಕಲಾ ಪರಿಷತ್ತು ಅಧ್ಯಕ್ಷ, ಸುರೇಶ್ ರಾವ್ ಅತ್ತೂರು, ಮನೆಮನೆಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ತೋನ್ಸೆ ಪುಷ್ಕಳ ಕುಮಾರ್, ಸುರತ್ಕಲ್ ವೆಂಕಟರಮಣ ಭಟ್ ಮತ್ತಿತರರಿದ್ದರು ಅಕ್ಷತಾ ಎನ್. ಶೆಟ್ಟಿ ನಿರೂಪಿಸಿದರು. ರಾಮದಾಸ ಪಾವಂಜೆ ವಂದಿಸಿದರು.