ಪಡುಪೆರಾರ ಗ್ರಾಪಂನಲ್ಲಿ ನೀರಿನ ಟ್ಯಾಂಕ್, ಚೆಕ್, ವೈದ್ಯಕೀಯ ಉಪಕರಣ ವಿತರಣೆ, ರಿಕ್ಷಾ ಸ್ಟ್ಯೇಂಡ್ ಉದ್ಘಾಟನೆ
Thursday, February 20, 2025
ಬಜಪೆ : ಶಕ್ತಿಯ ವಿಕೇಂದ್ರೀಕರಣಕ್ಕೆ ಪಂಚಾಯತ್ ವ್ಯವಸ್ಥೆ ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕೆಂಬ ನಿಟ್ಟನಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ರೂಪಿಸಲಾಗಿದೆ. ಹಳ್ಳಿಯ ಮೂಲೆಯಲ್ಲಿರುವವರಿಗೆ ಪಂಚಾಯತ್ ಮೂಲಕ ಉತ್ತಮ ಸೇವೆ ಒದಗಿಸುವುದು ಸದಸ್ಯರ ಕರ್ತವ್ಯವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಪಡುಪೆರಾರ ಗ್ರಾಮ ಪಂಚಾಯತ್ ಫೆ. 19ರಂದು ಆಯೋಜಿಸಿದ ಆಟೋ ರಿಕ್ಷಾ ಪಾರ್ಕ್ ಉದ್ಘಾಟನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶ್ರೇಯೋಭಿವೃದ್ಧಿ ಅನುದಾನದಡಿ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಕುಡಿಯುವ ನೀರಿನ ಸಿಂಟೆಕ್ಸ್ ವಿತರಣೆ ಮತ್ತು ವಿಶೇಷ ಚೇತನರ ಸಹಾಯಧನ ಚೆಕ್ ವಿತರಣೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿ, ಪಡುಪೆರಾರ ಗ್ರಾಪಂ ಆರ್ಥಿಕವಾಗಿ ಸದೃಢವಾಗಿದೆ ಎಂಬುದಕ್ಕೆ ವರ್ಷಾಂತ್ಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವೇ ನಿದರ್ಶನ. ಭೌಗೋಳಿಕವಾಗಿ ಎಲ್ಲ ಅವಕಾಶ ಹೊಂದಿರುವ ಈ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಾಮೂಹಿಕ ಚಿಂತನೆ ನಡೆಸಬೇಕು ಎಂದರು.
ಬಜ್ಪೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಂಕರನಾಗ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಇಲ್ಲಿನ ಪಂಚಾಯತ್ ಪ್ರತಿನಿಧಿಗಳು ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗೆ ಜೊತೆ ಉತ್ತಮ ಸಹಕಾರ ನೀಡಿದ್ದಾರೆ. ಇಂತಹ ಸಹಕಾರ-ಒಗ್ಗಟ್ಟು ಪ್ರತಿಯೊಂದು ಉತ್ತಮ ಕೆಲಸಗಳಲ್ಲಿರಬೇಕು ಎಂದು ಆಶಿಸಿದರು.
ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಉಗ್ಗಪ್ಪ ಮೂಲ್ಯ ವಿಕಲಚೇತನರ ಸಹಾಯಧನ ಚೆಕ್ ಪಟ್ಟಿ ಓದಿದರು. ಒಟ್ಟು 13 ಮಂದಿ ಎಸ್‌ಸಿ/ಎಸ್‌ಟಿ ಕುಟುಂಬಕ್ಕೆ ನೀರಿನ ಟ್ಯಾಂಕ್ ವಿತರಿಸಲಾಯಿತು. ರಾಮಣ್ಣ ಪೂಜಾರಿ ಕುಕ್ಕಟ್ಟೆ ಅವರಿಗೆ ಕೃತಕ ಕಾಲು ವಿತರಿಸಲಾಯಿತು. ನೂತನ `ಕೇಸರಿ' ಆಟೋ ರಿಕ್ಷಾ ಪಾರ್ಕ್ ಉದ್ಘಾಟಿಸಿದ ಶಾಸಕರು ರಿಕ್ಷಾ ಚಲಾಯಿಸಿ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಜಯಂತ ಪೂಜಾರಿ, ಪಡುಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಆರೋಗ್ಯ-ಅಂಗನವಾಡಿ-ಆಶಾ ಕಾರ್ಯಕರ್ತರು, ಬಿಜೆಪಿ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಯಶವಂತ ಪೂಜಾರಿ ಸ್ವಾಗತಿಸಿದರು. ನವೀನ್ ಕುಮಾರ್ ಪೆರಾರ ನಿರೂಪಿಸಿದರು. ಪಂಚಾಯತ್ ಲೆಕ್ಕ ಸಹಾಯಕ ನಾಗೇಶ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಮೂಡುಪೆರಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಸಿಎಫ್‌ನ ಸಿಎಸ್‌ಆರ್ ಅನುದಾನದಡಿ ಒದಗಿಸಲಾದ ಇಸಿಜಿ ಉಪಕರಣ ಹಾಗೂ ಇತರ ಕೆಲವು ಮಹತ್ವದ ವೈದ್ಯಕೀಯ ಸೊತ್ತನ್ನು ಎಂ ಸಿಎಫ್ ಅಧಿಕಾರಿಗಳು ಪಂಚಾಯತ್ ಮೂಲಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು. ಎಂಸಿಎಫ್‌ನ ಅಧಿಕಾರಿಗಳಾದ ಎಸ್. ಗಿರೀಶ್(ಸಿಎಂ), ಚೇತನ್ ಮೆಂಡೋನ್ಸ(ಎಚ್‌ಆರ್), ಡಾ. ಯೋಗೇಶ್, ಅವಿನಂದ್(ಪಿಆರ್‌ಒ) ಮತ್ತು ವೈದ್ಯಾಧಿಕಾರಿ ಡಾ. ಶಂಕರ್‌ನಾಗ್ ಮತ್ತಿತರರು ಇದ್ದರು.
----