ಕವತ್ತಾರು ಆದಿ ಆಲಡೆ ಕ್ಷೇತ್ರ : 7 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ
Friday, February 28, 2025
ಮೂಲ್ಕಿ : ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರಸಿದ್ದ ಸಿರಿ ಅರಾಧನಾ ಕ್ಷೇತ್ರ ಹಾಗೂ ಆದಿ ಆಲಡೆಗಳಲ್ಲಿ ಒಂದಾಗಿರುವ ಸಿರಿ ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕವತ್ತಾರು ಕ್ಷೇತ್ರವು ಸುಮಾರು 7 ಕೋ. ರೂ. ವೆಚ್ಚದಲ್ಲಿ ನೂತನ ದೇಗುಲದ ಪರಿಕಲ್ಪನೆಯಲ್ಲಿ ಜೀರ್ಣೋದ್ಧಾರಗೊಳ್ಳಲಿದ್ದು, ಜೀರ್ಣೋದ್ದಾರದ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ನೀನ ನಿತ್ಯಾನಂದ ಅಜಿಲ ಹೇಳಿದರು.
ಅವರು ಶ್ರೀ ಕ್ಷೇತ್ರದಲ್ಲಿ ಶುಕ್ರವಾರದಂದು ನಡೆದ ಪತ್ರಿಕಾ ಗೋಷ್ಡಿಯಲ್ಲಿ ಮಾಹಿತಿಯನ್ನು ನೀಡಿದರು.ಶಿಲಾ ದೇಣಿಗೆಯ ಮೂಲಕ ಪ್ರತೀ ಭಕ್ತರು ತಮ್ಮ ಸೇವೆಯನ್ನು ನೀಡುವ ಅವಕಾಶ ಇದೆ, ಪ್ರಥಮ ಹಂತದಲ್ಲಿ ಉಲ್ಲಾಯ, ನಂದಿಗೋಣ, ನಾಗಬ್ರಹ್ಮ, ಭೂತರಾಜ, ಮೈಸಂದಾಯ, ಜುಮಾದಿ, ಜಾರಂದಾಯ, ಪಂಜುರ್ಲಿ, ರಕ್ತೇಶ್ವರೀ ಮತ್ತು ಆದಿನಾಗ ದೇವರ ಗುಡಿಗಳು ಜೀರ್ಣೋದ್ಧಾರಗೊಳ್ಳಲಿದೆ ಇದಕ್ಕೆ ಭಕ್ತರ ಸಹಕಾರ ಮುಖ್ಯವಾಗಿದ್ದು, ತುಳುನಾಡಿನ ಪ್ರತೀ ಕುಟುಂಬದ ಆಲಡೆಯಾಗಿರುವ ಈ ಕ್ಷೇತ್ರವನ್ನು ಉಳಿಸಿ ಬೆಳೆಸುವ ಜವಬ್ದಾರಿಯು ಇದೆ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷೆ ಬಳ್ಕುಂಜೆ ಗುತ್ತು ಮಲ್ಲಿಕಾ ಯಶವಂತ ಶೆಟ್ಟಿ ಮಾಹಿತಿ ನೀಡಿ, ಜನರ ಸಂಕಷ್ಟಕ್ಕೆ ಹಾಗೂ ಇಷ್ಟಾರ್ಥಕ್ಕೆ ದೈವ ಕ್ಷೇತ್ರವಾಗಿರುವ ಕಬತ್ತಾರ್ ಕ್ಷೇತ್ರವು ಸಂಪೂರ್ಣವಾಗಿ ಪರಂಪರೆಯಂತೆ ನಿರ್ಮಾಣವಾಗಲಿದೆ. ದಾನಿಗಳ ಹಾಗೂ ಭಕ್ತರ ಸಹಕಾರದಿಂದ ಮಾತ್ರ ಇದು ಸಾಧ್ಯವಿದೆ. ಅನೇಕ ಸಂಘ ಸಂಸ್ಥೆಗಳು ಸಹ ಮುಂದಿನ ದಿನದಲ್ಲಿ ಕರಸೇವೆಯ ಮೂಲಕ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಕ್ಷೇತ್ರದ ತಂತ್ರಿಗಳಾದ ವೇ.ಮೂ.ವೇದವ್ಯಾಸ ತಂತ್ರಿ ಮಾತನಾಡಿ, ಪವಿತ್ರ ಕ್ಷೇತ್ರದ ಪುನರುತ್ಥಾನದ ಸೇವೆಯೇ ಒಂದು ಸೌಭಾಗ್ಯವಾಗಿದೆ. ಧಾರ್ಮಿಕ ನಂಬಿಕೆಗಳನ್ನು ಇಂತಹ ಕಾರ್ಣಿಕ ಕ್ಷೇತ್ರಗಳಲ್ಲಿ ಇಂದಿಗೂ ಉಳಿದಿದೆ ಎಂದರು.
ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾಹಿತಿ ನೀಡಿ, ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವು ಮೇ11ರಿಂದ 15ರವರೆಗೆ ನಡೆಯಲಿದೆ. ಹುಣ್ಣಿಮೆಯ ಸಿರಿ ಜಾತ್ರೆಯು ಮೇ 12ರಂದು ನಡೆಯಲಿದೆ. ಈ ಮೊದಲು ಪ್ರಥಮ ಹಂತದ ಕಾಮಗಾರಿ ನಡೆಯಲಿದೆ ಎಂದರು.
ನಂತರ ಎಲ್ಲಾ ಗುಡಿಗಳ ಶಿಲಾನ್ಯಾಸವು ನೆರವೇರಿತು.. ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಡಾ. ನಿತ್ಯಾನಂದ ಶೆಟ್ಟಿ ಬಿಡುಗಡೆಗೊಳಿಸಿದರು.