ಪ್ರಮೀಳಾ ದೀಪಕ್ ಪೆರ್ಮುದೆ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ
Tuesday, February 18, 2025
ಬಜಪೆ: ಎಂಆರ್‌ಪಿಎಲ್ ಸಂಸ್ಥೆಯ ಉದ್ಯೋಗಿ ಪ್ರಮೀಳಾ ದೀಪಕ್ ಪೆರ್ಮುದೆ ಅವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ 'ವುಮೆನ್ ಇನ್ ಪಬ್ಲಿಕ್ ಸೆಕ್ಟರ್' (ವಿಪ್ಸ್) ಸಂಸ್ಥೆ ನೀಡುವ ರಾಷ್ಟ್ರಮಟ್ಟದ ಶ್ರೇಷ್ಠ ಮಹಿಳಾ ಉದ್ಯೋಗಿ ಪ್ರಶಸ್ತಿಯನ್ನು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಫೆ.17ರಂದು ಪಡೆದುಕೊಂಡರು.
ರಾಷ್ಟ್ರಮಟ್ಟದಲ್ಲಿ ನೀಡಲಾಗುವ ತೃತೀಯ ಸ್ಥಾನದ ಪ್ರಶಸ್ತಿ ಇದಾಗಿದ್ದು ಎಂಆರ್‌ಪಿಎಲ್ ಸಂಸ್ಥೆಯ ಸಿಬ್ಬಂದಿ ಯೊಬ್ಬರಿಗೆ ವೈಯಕ್ತಿಕವಾಗಿ ಪ್ರಶಸ್ತಿ ಸಿಗುತ್ತಿರುವುದು ಇದೇ ಮೊದಲು. ಪ್ರಾಥಮಿಕ ಮೌಲ್ಯಮಾಪನಗಳ ಬಳಿಕ ಎಂಆರ್‌ಪಿಎಲ್ ಸಂಸ್ಥೆ ಪ್ರಮೀಳಾ ದೀಪಕ್ ಪೆರ್ಮುದೆ ಅವರ ಹೆಸರನ್ನು ಪ್ರಶಸ್ತಿಗೆ ನಾಮಿನೇಟ್ ಮಾಡಿತ್ತು. ಅವರು ಕರ್ನಾಟಕ ರಾಜ್ಯ ಸರಕಾರ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸಹಿತ ಜ್ಞಾನಜ್ಯೋತಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬಸವರತ್ನ ರಾಷ್ಟ್ರೀಯ ಪ್ರಶಸ್ತಿ, ಅಕ್ಕ ಮಹಾದೇವಿ ರಾಷ್ಟ್ರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.