ಜ. 26, ಕಟೀಲಿನಲ್ಲಿ ಪೇಜಾವರ ಸದಾಶಿವ ರಾವ್ ನೆನಪು
Wednesday, January 22, 2025
ಕಟೀಲು : ಖ್ಯಾತ ಸಾಹಿತಿ ಪೇಜಾವರ ಸದಾಶಿವ ರಾವ್ ಅವರ ನೆನಪು ಕಾರ್ಯಕ್ರಮವನ್ನು ಮೂಲ್ಕಿ ಕಸಾಪ ಘಟಕ ಜನವರಿ ೨೬ರ ಭಾನುವಾರ ಸಂಜೆ ಗಂಟೆ ೪ಕ್ಕೆ ಕಟೀಲಿನಲ್ಲಿರುವ ಸದಾಶಿವ ರಾಯರಿದ್ದ ಮನೆಯಲ್ಲಿ ಆಯೋಜಿಸಿದೆ. ದ.ಕ.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಇವರ ಉಪಸ್ಥಿತಿಯಲ್ಲಿ ಖ್ಯಾತ ಬರಹಗಾರ ಬಿ. ಜನಾರ್ದನ ಭಟ್ ಸದಾಶಿವ ರಾಯ ಕುರಿತು ಮಾತನಾಡಲಿದ್ದಾರೆ. ಜ್ಯೋತಿ ಉಡುಪ ಹಾಗೂ ದಿನೇಶ್ ಕೊಡೆತ್ತೂರು ಸದಾಶಿವರ ರಾಯರ ಕವಿತೆಗಳನ್ನು ಹಾಡಲಿದ್ದಾರೆ. ಶ್ರೀಮತಿ ಶೈಲಜಾ ಅವರ ಕಥೆ ಓದಲಿದ್ದಾರೆ ಎಂದು ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.
ಪೇಜಾವರ ಸದಾಶಿವರಾಯರು (೧೯೧೩-೧೯೩೯)
ಕಟೀಲಿನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಹುಟ್ಟಿದವರು. ಅವರ ತಂದೆ ಶಾಮ ರಾಯರು ಪೇಜಾವರದಿಂದ ಕಟೀಲಿಗೆ ಬಂದು ಕೃಷಿಕರಾಗಿ ಜೀವಿಸುತ್ತಿದ್ದರು. ಪೇಜಾವರ ಸದಾಶಿವರಾಯರು ಎಕ್ಕಾರು, ಮೂಲ್ಕಿ ಶಾಲೆಗಳಲ್ಲಿ, ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ, ಕಾಶಿ ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಇಟಲಿಯಲ್ಲಿ ಪಿ.ಎಚ್.ಡಿ. ಮಾಡಲು ತೆರಳಿದ್ದರು. ಅಲ್ಲಿ ಪೆರಿಟೊನೈಟಿಸ್ ಎಂಬ ಕರುಳುಬೇನೆಗೆ ತುತ್ತಾಗಿ ತಮ್ಮ ೨೭ನೆಯ ವಯಸ್ಸಿಗೆ ತೀರಿಕೊಂಡರು.
ಕವಿತೆಗಳನ್ನೂ, ನಾಟಕ ಗಳನ್ನೂ, ಕತೆಗಳನ್ನೂ ಸಮಾನ ಉತ್ಸಾಹದಿಂದ ಬರೆದರು. ಕತೆ, ಕವಿತೆಗಳಲ್ಲಿ ನಿರಂತರ ಪ್ರಯೋಗಶೀಲರಾಗಿದ್ದ ಅವರು ಇಟಲಿಯಲ್ಲಿ ಕನ್ನಡದ ಮೊದಲ ನವ್ಯ ಕವಿತೆಗಳನ್ನು ಬರೆದರು. ಇವರು
ಬರೆದ ನಾಟ್ಯೋತ್ಸವವೇ ಕನ್ನಡದ ಮೊದಲನೆಯ ನವ್ಯ ಕವಿತೆ ಎಂದು ಗುರುತಿಸಲ್ಪಟ್ಟಿದೆ. ವಿ.ಕೆ.ಗೋಕಾಕರ ಪ್ರೇರಣೆಯಿಂದ ರಂ.ಶ್ರೀ.ಮುಗಳಿ ಮತ್ತು ವರದರಾಜ ಹುಯಿಲಗೋಳರು ಸೇರಿ ಸದಾಶಿವ ರಾಯರ ಲಭ್ಯ ಕವನಗಳನ್ನು ಮರಣೋತ್ತರವಾಗಿ ಸಂಪಾದಿಸಿ ವರುಣ ಎಂಬ ಹೆಸರಿನಲ್ಲಿ ಹೊರ ತಂದರು. ಸದಾಶಿವರಾಯರ ಸಮಗ್ರ ಬರಹಗಳನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿದೆ.