ಇಳಿವಯಸ್ಸಿನಲ್ಲೂ ಊರೂರು ಅಲೆದು ಫಿನಾಯಿಲ್ ಮಾರಾಟ,ಎಲ್ಲ ಕಾಲಕ್ಕೂ ಸಲ್ಲುವ `ಸ್ವಾಭಿಮಾನಿ' ಆದರ್ಶ ದಂಪತಿ
Sunday, December 1, 2024
- ಧನಂಜಯ ಗುರುಪುರ
ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಕಷ್ಟಗಳೇ ಜೀವನವಾದರೆ, ಅಲ್ಲಿ ಸುಖ ಹುಡುಕುವುದು ಮತ್ತೂ ಕಷ್ಟ ! ಆದರೆ ಈ ಮಾತಿಗೂ ಮೀರಿದ ಕಷ್ಟದಲ್ಲಿರುವ ಬಡ-ಸಣಕಲು ಜೀವಗಳೆರಡು ತಮ್ಮೊಳಗೆ ಸಂತೋಷ ಹಂಚಿಕೊಂಡು, ಹೆಗಲಿಗೆ ಹೆಗಲು ಕೊಟ್ಟು ಬದುಕುವ ಪರಿ ಮಾತ್ರ, `ವರ್ತಮಾನದಲ್ಲಿ ಕಷ್ಟಗಳಿಗೆ ಸ್ಪಷ್ಟ ಉತ್ತರ ಕೊಡಲಾಗದೆ ಜೀವನದಲ್ಲಿ ಸೋತಿದ್ದೇವೆ' ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ ಮಾದರಿಯಾಗಿದೆ. ಹೌದು, ಗುರುಪುರ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‍ನಲ್ಲಿ ವಾಸಿಸುತ್ತಿರುವ ಶಿವ-ಪಾರ್ವತಿ ದಂಪತಿಯ ಕತೆ, ಜೀವನದ `ಸುಖಮಯ ವ್ಯಥೆ' ಹೀಗೆ ಮುಂದುವರಿಯುತ್ತದೆ. ಹಾಗಾಗಿಯೇ ಇವರು ಎಲ್ಲ ಕಾಲಕ್ಕೂ ಸಲ್ಲುವ `ಸ್ವಾಭಿಮಾನಿ' ಆದರ್ಶ ದಂಪತಿ.
ಬದುಕಿನಲ್ಲಿ ಶ್ರೀಮಂತಿಕೆಗಿಂತ ನೆಮ್ಮದಿ ಮುಖ್ಯ ಎಂಬೊಂದು ಮಾತಿದೆ. ಇದಕ್ಕೆ ಅಪವಾದವೆಂಬಂತೆ ಗುರುಪುರದ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‍ನ ಮನೆಯೊಂದರಲ್ಲಿ ಶಿವಾನಂದ ಮಲ್ಯ(ಶಿವ-73) ಮತ್ತು ಪಾರ್ವತಿ(70) ದಂಪತಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಮಕ್ಕಳಿಬ್ಬರಿದ್ದಾರೆ. ಪುತ್ರ ಹಾಗೂ ಪುತ್ರಿಗೆ ವಿವಾಹವಾಗಿದ್ದು, ಅವರ ಪಾಡಿಗೆ ಅವರಿದ್ದಾರೆ. ಈ ವಯೋವೃದ್ಧ ಜೋಡಿ ಹಕ್ಕಿಯು `ಕಾಯಕವೇ ಕೈಲಾಸ' ಎಂಬ ನಾಲ್ನುಡಿಯಂತೆ ಕಷ್ಟದಲ್ಲಿ ಇಷ್ಟದ ಜೀವನ ನಡೆಸುತ್ತಿದ್ದಾರೆ. ಇವರು ತಮ್ಮ ಜೀವನ ಹೊರೆಯಲು ಕಳೆದ 35 ವರ್ಷಗಳಿಂದ ಮನೆಯಲ್ಲೇ ಫಿನಾಯಿಲ್ ತಯಾರಿಸಿ ಮನೆ-ಮನೆಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ದಣಿವರಿಯದ ಈ ಜೋಡಿಯು ವೃತ್ತಿಯಲ್ಲಿ ತೃಪ್ತಿ ಕಂಡಿರುವುದು ಅವರ ಮಾತುಗಳಿಂದ ವ್ಯಕ್ತವಾಗುತ್ತದೆ.
35 ವರ್ಷದ ಹಿಂದೆ, ಪಾರ್ವತಿ ಅವರನ್ನು ವಿವಾಹವಾಗುವುದಕ್ಕಿಂತ ಮುಂಚೆ ಮಂಗಳೂರಿನ ರಥಬೀದಿಯಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ಶಿವಾನಂದ ಮಲ್ಯ ಅವರು ಮುಂದೆ ಕಮಿಶನ್ ಆಧರಿಸಿ ಫಿನಾಯಿಲ್ ಮಾರಾಟ ಮಾಡಲಾರಂಭಿಸಿದರು. ವಿವಾಹದ ಬಳಿಕ ಇಬ್ಬರೂ ಈ ವೃತ್ತಿ ಮುಂದುವರಿಸಿ ಇಂದು ಮನೆಯಲ್ಲೇ ಒಂದಷ್ಟು ಫಿನಾಯಿಲ್ ತಯಾರಿಸಿ ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ. ಫಿನಾಯಿಲ್ ತಯಾರಿಸಿ, ಮಾರಾಟ ಮಾಡುವ ಇವರ ಜೀವನದ ಕತೆ ಮಾತ್ರ ಅತಿ ರೋಚಕ ಹಾಗೂ ಅಷ್ಟೇ ಸಾಹಸಮಯವಾಗಿದೆ !
ಊರೂರು ಸೈಕಲ್ ದಂಡಯಾತ್ರೆ !
ನಾಲ್ಕು ಚೀಲದಲ್ಲಿ ಸುಮಾರು 20-25 ಬಾಟಲಿ ಫಿನಾಯಿಲ್ ಬಾಟಲಿ ತುಂಬಿಸಿ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಈ ದಂಪತಿ ಹೊರಡುತ್ತಾರೆ. ಎತ್ತರದ ಗುಡ್ಡ ಪ್ರದೇಶದಲ್ಲಿ(ಮಠದಗುಡ್ಡೆ) ಇವರ ಮನೆ ಇದ್ದು, ರಸ್ತೆವರೆಗೆ ಬಂದು ಅಲ್ಲಿಂದ ಗುರುಪುರ ಪೇಟೆಯವರೆಗೆ ಹಳೆಯ ಸೈಕಲೊಂದರಲ್ಲಿ ಬರುತ್ತಾರೆ. ಬಹುತೇಕ ದಿನ ದೂರದ ಗುರುಪುರದಲ್ಲೇ ಸೈಕಲ್ ನಿಲ್ಲಿಸಿ ರಿಕ್ಷಾ ಅಥವಾ ಬಸ್‍ನಲ್ಲಿ ನಿಗದಿತ ಪ್ರದೇಶಕ್ಕೆ ಫಿನಾಯಿಲ್ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಕಳೆದ 45 ವರ್ಷದಿಂದ ಈ ವೃತ್ತಿ ನಡೆಸುತ್ತಿರುವ ಶಿವಾನಂದರಿಗೆ ಸೈಕಲ್ ಬಿಡಲು ಗೊತ್ತಿಲ್ಲ. ಸೈಕಲ್‍ನಲ್ಲಿ ಫಿನಾಯಿಲ್ ಬಾಟಲಿಗಳ ಚೀಲಗಳನ್ನಿಟ್ಟು ಇಬ್ಬರೂ ಸೈಕಲ್ ದೂಡಿಕೊಂಡು ಮುಂದೆ ಸಾಗುತ್ತಾರೆ. ಕಲ್ಲು ಹೃದಯವನ್ನೂ ಕರಗಿಸುವ ನಿತ್ಯದ ದೃಶ್ಯ ಇದಾಗಿದೆ. ಹತ್ತಿರದ ಊರುಗಳಿಗೆ ಸೈಕಲ್ ದೂಡಿಕೊಂಡು ಹೋಗುವುದು ಇವರ ನಿತ್ಯದ ಕಾಯಕವಾಗಿದೆ. ಇಷ್ಟಿದ್ದರೂ ಇಳಿ ವಯಸ್ಸಿನ ದಂಪತಿಯ ಮುಖದಲ್ಲಿ ಯಾವತ್ತೂ ಬೇಸರ ಅಥವಾ ದುಃಖದ ಛಾಯೆ ಕಂಡು ಬಂದಿಲ್ಲ. ಎಲ್ಲರೊಂದಿಗೆ ನಗುಮುಖದಿಂದ ಮಾತನಾಡಿಸುತ್ತಾರೆ. ಹಾಗಾಗಿಯೇ, ಮನೆಯಲ್ಲೇ ತಯಾರಿಸಿದ ಅವರ ಫಿನಾಯಿಲ್‍ಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಬೇಡಿಕೆ ಇದೆ. ಒಂದು ಲೀಟರ್ ಬಾಟಲಿ ಫಿನಾಯಿಲ್‍ಗೆ ಇವರು ಪಡೆಯುವ ಮೊತ್ತ ಕೇವಲ 40 ರೂ
ಆರಂಭದ ದಿನಗಳಲ್ಲಿ ಮಂಗಳೂರಿನ ಸಹಿತ ಉಡುಪಿ, ಕುಂದಾಪುರ, ಪಡುಬಿದ್ರೆ, ಮೂಲ್ಕಿಯತ್ತ ಫಿನಾಯಿಲ್ ಮಾರಾಟ ಪ್ರಯಾಣ ಬೆಳೆಸುತ್ತಿದ್ದ ಇವರು ಇತ್ತೀಚಿನ ಕೆಲವು ವರ್ಷಗಳಿಂದ ಪೊಳಲಿ, ಮಳಲಿ, ಕುಪ್ಪೆಪದವು, ನಡುಗುಡ್ಡೆ, ಮೂಡುಶೆಡ್ಡೆ, ಬಂದರು, ಬೆಂಗರೆ, ಪಡೀಲ್-ಜಲ್ಲಿಗುಡ್ಡೆ, ಪದಂಗಡಿ, ಉಳ್ಳಾಲ ಮತ್ತಿತರ ಪ್ರದೇಶಗಳಲ್ಲಿ ಫಿನಾಯಿಲ್ ಮಾರಾಟ ಮಾಡುತ್ತಿದ್ದಾರೆ. ಮಾಲ್ ಮತ್ತಿತರ ಅಂಗಡಿಗಳಲ್ಲಿ ಹೊಸಹೊಸ ಬ್ರಾಂಡ್‍ಗಳ ಘಮಘಮಿಸುವ ಫಿನಾಯಿಲ್ ಲಭ್ಯವಿದ್ದರೂ, ಶಿವ-ಪಾರ್ವತಿ ದಂಪತಿಯ ಫಿನಾಯಿಲ್‍ಗೆ ಕೆಲವೆಡೆ ಖಾಯಂ ಗಿರಾಕಿಗಳಿದ್ದರೆ, ಇನ್ನು ಹಲವೆಡೆ ಹೊಸ ಗಿರಾಕಿಗಳು ಹುಟ್ಟಿಕೊಳ್ಳುತ್ತಾರೆ. ಆದ್ದರಿಂದ ಈ `ನೈಜ ಆದರ್ಶ ದಂಪತಿ'ಯ ವೃತ್ತಿ ಹಾಗೂ ಇಳಿ ವಯಸ್ಸಿನಲ್ಲೂ ಕೆಲಸ ಮಾಡಿ ಜೀವನ ಸಾಗಿಸುವ ಹುಮ್ಮಸ್ಸಿಗೆ ಯಾವತ್ತೂ ಹಿನ್ನಡೆಯಾಗಿಲ್ಲ. ಇವರ ವ್ಯಕ್ತಿತ್ವ ಯುವ ಪೀಳಿಗೆಗೆ ಆದರ್ಶವಾಗಿದೆ.
ಸ್ಥಳೀಯವಾಗಿ ಮನೆ-ಮನೆಗಳಲ್ಲಿ ಒಂದಷ್ಟು ಖಾಲಿ ಪ್ಲಾಸ್ಟಿಕ್ ಬಾಟಲಿ ಪುಕ್ಕಟೆಯಾಗಿ ಸಿಕ್ಕಿದರೆ, ಅಂಗಡಿ ಅಥವಾ ಬಾರ್‍ಗಳಲ್ಲಿ ಒಂದು ಬಾಟಲಿಗೆ 1 ರೂಪಾಯಿ ಕೊಟ್ಟು ಪಡೆಯುತ್ತಾರೆ. ಹೀಗೆ ವಾರಕ್ಕೊಂದು ಬಾರಿ ಹೊಸ ಬಾಟಲಿ ಸಂಗ್ರಹಿಸಿ, ಸ್ವಚ್ಛಗೊಳಿಸಿ ಅದರಲ್ಲಿ ನಾಲ್ಕೈದು ಬಣ್ಣದ ಫಿನಾಯಿಲ್ ತುಂಬಿಸಿ ಮಾರಾಟ ಮಾಡುತ್ತಾರೆ. ಹಿಂದೆ ಊರಿನಲ್ಲಿ ಲಭ್ಯವಿರುವ ಗೆಡ್ಡೆ ಮತ್ತು ಇತರ ಕಚ್ಛಾ ವಸ್ತು ಬಳಸಿ, ಬೇಯಿಸಿ ಫಿನಾಯಿಲ್ ಮಿಶ್ರಣ ತಯಾರಿಸುತ್ತಿದ್ದರೆ, ಈಗ ಅಂತಹ ಕಷ್ಟವಿಲ್ಲ. ಫಿನಾಯಿಲ್ ತಯಾರಿಸಲು ಅಗತ್ಯವಿರುವ ಎಲ್ಲ ಸಿದ್ಧ ಕಚ್ಛಾ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ಶಿವ-ಪಾರ್ವತಿ ಹೇಳುತ್ತಾರೆ.
``ಮಕ್ಕಳಿದ್ದಾರೆ ಎಂದು ಸುಮ್ಮನೆ ಇರಲಾಗುತ್ತದೆಯೇ ? ಅವರ ಪಾಡಿಗೆ ಅವರಿದ್ದಾರೆ. ಕೆಲಸ ಮಾಡುವ ಹುಮ್ಮಸ್ಸಿದೆ, ಹಾಗಾಗಿ ಈವರೆಗೂ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಡಿಮೆ ಆದಾಯವಿದೆ ಎಂಬ ಬೇಸರವಿಲ್ಲ. ಆದಾಯ ಬದುಕಿಗಾಸರೆಯಾಗಿದೆ. ಕಾರಣ, ನಾವಿಬ್ಬರೂ ಹೆಚ್ಚಿನ ದಿನಗಳಲ್ಲಿ ಒಂದು ಊಟ, ಒಂದು ಉಪಾಹಾರ ಹಂಚಿ ತಿನ್ನುತ್ತೇವೆ. ಶ್ರೀಮಂತನಿರಲಿ, ಬಡವನಿರಲಿ ದೇಹದಲ್ಲಿ ಚೈತನ್ಯ ಇರುವಷ್ಟು ದಿನ ದುಡಿದು ತಿನ್ನಬೇಕು. ಇತರರಿಗೆ ಹೊರೆಯಾಗಿರಕೂಡದು'' ಎಂದು ಶಿವ-ಪಾರ್ವತಿ ಹೇಳುತ್ತಾರೆ.
ಮಾನವೀಯ ನೆಲೆಯಲ್ಲಿ ಫಿನಾಯಿಲ್ ಖರೀಸುವ ಮಂದಿ ಶಿವ-ಪಾರ್ವತಿ ದಂಪತಿಯ ಈ ದೂರವಾಣಿ ಸಂಖ್ಯೆ(9901945937) ಸಂಪರ್ಕಿಸಬಹುದು. ಹೆಸರು ಪಾರ್ವತಿ, ಬ್ಯಾಂಕ್ : ಕೆನರಾ, ಎ/ಸಿ ಖಾತೆ ಸಂಖ್ಯೆ : 01242250001432, ಐಎಫ್‍ಎಸ್‍ಸಿ : ಸಿಎನ್‍ಆರ್‍ಬಿ0010124