ರಾಷ್ಟ್ರೀಯ ಹೆದ್ದಾರಿ ಡಾಮರೀಕರಣ ನಿಯಮ ಪಾಲಿಸಲು ಆಗ್ರಹ
Wednesday, November 20, 2024
ಸುರತ್ಕಲ್ : ಇಲ್ಲಿನ ಎನ್.ಐ.ಟಿ.ಕೆಯಿಂದ ಕಟಪಾಡಿವರೆಗೆ ರಾಷ್ಟ್ರೀಯ ಹೆದ್ದಾರಿ ಮರು ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಸರಕಾರದ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ.
ಈ ಬಗ್ಗೆ ಮೂಲ್ಕಿಯ ನ್ಯಾಯವಾದಿ ಡೇನಿಯಲ್ ದೇವರಾಜ್ ಪತ್ರಿಕಾ ಹೇಳಿಕೆಯನ್ನು ನೀಡಿ, ಮರು ಡಾಮರೀಕರಣವು ಸಂಜೆ 6ರಿಂದ 7ವರೆಗೆ ಮಳೆಯ ಸಂದರ್ಭದಲ್ಲಿಯೂ ಮರು ಡಾಮರೀಕರಣಗೊಳಿಸಿರುವುದರಿಂದ ಮೂಲ್ಕಿ ಹಾಗೂ ಹಳೆಯಂಗಡಿ ಜಂಕ್ಷನ್ ನಲ್ಲಿ ಕಾಮಗಾರಿ ನಡೆದ ನಂತರ ಡಾಮರ್ ಬಣ್ಣ ಬಿಳಿ ಬಣ್ಣಕ್ಕೆ ತಿರುಗಿ ಅವೈಜ್ಞಾನಿಕವಾಗಿ ಮಾಡಿರುವುದರಿಂದ ಮಳೆಗೆ ಹಾಕಿದ ಡಾಮರ್ ತೆರವುಗೊಳಿಸಿ ನಿಯಮ ಪ್ರಕಾರ ಡಾಂಬಾರು ಹಾಕುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈವರೆಗೆ ಸರಿಪಡಿಸಿಲ್ಲ ಎಂದು ಆರೋಪಿಸಿದ್ದಾರೆ.
ಮೂಲ್ಕಿ ಹೆದ್ದಾರಿ ಡಾಮರೀಕರಣ ಮಾಡುವಾಗ ಹೆದ್ದಾರಿ ಮಧ್ಯ ಭಾಗದಲ್ಲಿನ ಡಿವೈಡರ್ನಲ್ಲಿ ಬೆಳೆದ ಹುಲ್ಲುಗಳನ್ನು ಜಂಕ್ಷನಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛ ಪಡಿಸದೇ ರಾಷ್ಟ್ರೀಯ ಹೆದ್ದಾರಿಗೆ ಡಾಂಬಾರು ಹಾಕುವಾಗ ಗಾಳಿಗೆ ಸದ್ರಿ ಪ್ಲಾಸ್ಟಿಕ್ ಬಿದ್ದು ಡಾಮರೀಕರಣ ಕಳಪೆಯಾಗುತ್ತಿದೆ, ಆದರಿಂದ ಮೊದಲು ಸದ್ರಿ ಪ್ಲಾಸ್ಟಿಕ್, ಕಸಗಳನ್ನು ಸ್ವಚ್ಛ ಪಡಿಸಿದ ನಂತರವೇ ಡಾಂಬಾರು ಹಾಕುವಂತೆ ತಮ್ಮ ಮನವಿಯಲ್ಲಿ ಹೆದ್ದಾರಿ ಇಲಾಖೆಯನ್ನು ವಿನಂತಿಸಿದ್ದಾರೆ.
ಹೆದ್ದಾರಿಯಲ್ಲಿನ ಡಾಂಬಾರು ದಪ್ಪ 30ಎಂ.ಎಂ.ಗಿಂತಲೂ ಕಡಿಮೆ ಪದರದಲ್ಲಿ ಡಾಂಬಾರು ಹಾಕುತ್ತಿದ್ದು ಜಲ್ಲಿಯ ಮಿಶ್ರಣದಲ್ಲಿ 6ಮೀ, 8ಮೀ 20ಮಿ ಜಲ್ಲಿಯ ಮಿಶ್ರಣದಲ್ಲಿ ಡಾಂಬಾರು ಪ್ರಮಾಣ ಇರಬೇಕೆಂಬ ನಿಯಮ ಪಾಲಿಸುತ್ತಿಲ್ಲ, ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ, ಪಾರದರ್ಶಕ ಕಾಮಗಾರಿಯ ಬಗ್ಗೆ ಕಾಮಗಾರಿಯ ವಿವರಣೆಯ ನಾಮಫಲಕವೂ ಹಾಕಿರುವುದಿಲ್ಲ ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ಕಾರ್ಯನಿರ್ವಹಕ ಅಭಿಯಂತರರಿಗೆ ಮನವಿ ಮಾಡಿದ್ದರೂ ಕಾನೂನು ಕ್ರಮ ಜರಗಿಸಿರುವುದಿಲ್ಲ ಎಂದು ಆರೋಪಿಸಿದ್ದು ಈ ಬಗ್ಗೆ ಕೇಂದ್ರ ಸರಕಾರದ ಹೆದ್ದಾರಿ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಡೇನಿಯಲ್ ದೇವರಾಜ್ ತಿಳಿಸಿದ್ದಾರೆ.