ತಾ. ೨೦ರಂದು ಕಟೀಲಿನಲ್ಲಿ ವಿಜ್ಞಾನ ವನ ಶಕ್ತಿ-೨.೦ ಉದ್ಘಾಟನೆ ವೈಜ್ಞಾನಿಕ ಪ್ರಯೋಗಗಳ ಅಪೂರ್ವ ಯೋಜನೆ
Sunday, November 17, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ನ ವೈಜ್ಞಾನಿಕ ಪ್ರಯೋಗಗಳ ಅಪೂರ್ವ ಯೋಜನೆ ವಿಜ್ಞಾನವನ ಶಕ್ತಿ ೨.೦ ತಾ. ೨೦ರ ಬುಧವಾರ ಉದ್ಘಾಟನೆಗೊಳ್ಳಲಿದೆ.
ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜೀ ಉದ್ಘಾಟಿಸಲಿದ್ದು, ಕಟೀಲು ದೇಗುಲದ ಸನತ್ಕುಮಾರ ಶೆಟ್ಟಿ, ವಾಸುದೇವ ಆಸ್ರಣ್ಣ, ಕ್ಯಾಪ್ಸ್ ಫೌಂಡೇಷನ್ನ ಚಂದ್ರಶೇಖರ ಶೆಟ್ಟಿ, ಅಮನ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ. ಕೃಷ್ಣ ಕಾಂಚನ್, ನಾಗೇಶ್ ರಾವ್ ಇವರಿಗೆ ಸಂಮಾನ ನಡೆಯಲಿದೆ.ಹತ್ತುಸಾವಿರ ವಿದ್ಯಾರ್ಥಿಗಳಿಂದ ವೀಕ್ಷಣೆ
ಸಿಎ. ಚಂದ್ರಶೇಖರ್ ಶೆಟ್ಟಿ ನೇತೃತ್ವದಲ್ಲಿ ಕಟೀಲು ವಿದ್ಯಾಸಂಸ್ಥೆಯಲ್ಲಿ ರೂ. ೨೫ಲಕ್ಷ ವೆಚ್ಚದಲ್ಲಿ ಸಯನ್ಸ್ ಪಾರ್ಕ್ ಉದ್ಘಾಟನೆಗೊಂಡಿತ್ತು. ಹೊರಾಂಗಣದಲ್ಲಿ ನಿರ್ಮಾಣವಾಗಿರುವ ವಿಜ್ಞಾನವನದಲ್ಲಿ ೨೯ ವಿವಿಧ ಮಾದರಿಗಳಿಂದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕಲಿಸುವ ವಿಶಿಷ್ಟ ಕಲ್ಪನೆಯ ಯೋಜನೆ ಇದಾಗಿತ್ತು. ಇದೀಗ ಕ್ಯಾಪ್ಸ್ ಫೌಂಡೇಷನ್ ಈ ವಿಜ್ಞಾನ ವನವನ್ನು ಮತ್ತೆ ರೂ.೨೦ ಲಕ್ಷದಲ್ಲಿ ವಿಸ್ತರಿಸಿದ್ದು, ಹೊಸದಾಗಿ ೨೨ ಉಪಕರಣಗಳನ್ನು ಅಳವಡಿಸಿದೆ. ಈಗ ೫೧ ಮಾದರಿಗಳಿಂದ ವಿಸ್ತಾರಗೊಂಡಿರುವ ವಿಜ್ಞಾನವನ ಎರಡನೆ ಹಂತದ ಉದ್ಘಾಟನೆಗೆ ಸಿದ್ಧವಾಗಿದೆ.
ಕಟೀಲಿನ ಈ ವಿಜ್ಞಾನವನಕ್ಕೆ ಬರುವ ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರು ಯಂತ್ರಗಳ ಮಾಹಿತಿ ಅವುಗಳ ಉಪಯೋಗಗಳನ್ನು ತಿಳಿಸಿಕೊಡುತ್ತಾರೆ. ಕಟೀಲು ಶಾಲೆಗಳ ವಿದ್ಯಾರ್ಥಿಗಳಲ್ಲದೆ ಇತರ ಶಾಲೆಗಳ ವಿದ್ಯಾರ್ಥಿಗಳಿಗೂ ಇಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಎರಡು ವರುಷಗಳಲ್ಲಿ ದಕ್ಷಿಣಕನ್ನಡವಲ್ಲದೆ ರಾಜ್ಯದ ಹದಿನಾರು ಜಿಲ್ಲೆಗಳ ೨೧೨ ಶಾಲೆಗಳ ೧೦೬೩೪ ವಿದ್ಯಾರ್ಥಿಗಳು ಈ ವಿಜ್ಞಾನವನಕ್ಕೆ ಭೇಟಿ ನೀಡಿದ್ದಾರೆ.
ಏನೇನೆಲ್ಲ ಇವೆ?
ಗ್ರಹಗಳ ಚಲನೆ, ರಾಟೆಗಳು, ಮಳೆ ಮಾಪಕ, ಬಾರ್ಟನ್ನ ಲೋಲಕಗಳು, ಸೈಕ್ಲೋಯ್ಡಲ್ ಮಾರ್ಗ, ಸುಳಿ, ಗರಿಷ್ಟ ಕನಿಷ್ಟ ಥರ್ಮಾ ಮೀಟರ್, ಗಾಳಿ ಚೀಲ, ಜಲ ವಿದ್ಯುತ್ ಸ್ಥಾವರ, ಪರವಲಯವನ್ನು ಹಾದು ಹೋಗುವ ಸರಳ ರೇಖೆ, ಪೈಥಾಗರಸ್ ಪ್ರಮೇಯ, ಪರವಲಯ ಪ್ರತಿಫಲಕ, ವಿಶ್ವ ಸಮಯ, ಶಕ್ತಿ ಸಂರಕ್ಷಣೆ, ಕನ್ನಡಿಗಳೊಂದಿಗೆ ಆಟ, ತರಂಗ ಚಲನೆ, ಉರುಳುವ ಚಕ್ರ, ದೃಷ್ಟಿಯ ನಿರಂತರತೆ, ನ್ಯೂಟನ್ನ ಬಣ್ಣದ ತಟ್ಟೆ, ಡಿಎನ್ಎ, ದ್ವಿಶಂಕು, ಸರಳ ಬಿಂಬಗ್ರಾಹಿ ಇವೆಲ್ಲ ಹೊಸದಾಗಿ ಸೇರ್ಪಡೆಗೊಂಡ ಮಾಡೆಲ್ಗಳು. ಪುಲ್ಲಿ ಸಿಸ್ಟಮ್, ಗೇರ್ನ ವೈವಿಧ್ಯಗಳು, ಸೋಲಾರ್ ವಾಟರ್ ಹೀಟರ್, ಅಟೋಮೊಬೈಲ್ ಮಾಡೆಲ್ ಹೀಗೆ ನಾನಾ ಮಾಡೆಲ್ಗಳು ಈ ಹಿಂದೆ ವಿಜ್ಞಾನವನದಲ್ಲಿ ಸ್ಥಾಪನೆಗೊಂಡಿದ್ದವು.
ಶಿಕ್ಷಣ ಕ್ಷೇತ್ರಕ್ಕೆ ಕ್ಯಾಪ್ಸ್ ಕೊಡುಗೆ
ಕಟೀಲು ವಿದ್ಯಾಲಯದಲ್ಲಿ ಸಯನ್ಸ್ ಪಾರ್ಕ್ ಸ್ಥಾಪಿಸಿದವರು ಕ್ಯಾಪ್ಸ್ ಫೌಂಡೇಷನ್ನ ಸಿಎ ಚಂದ್ರಶೇಖರ ಶೆಟ್ಟಿ. ಬಡತನದ ಹಿನ್ನಲೆಯಿಂದ ಬಂದ ಚಂದ್ರಶೇಖರ ಶೆಟ್ಟಿ ಕಟೀಲು ವಿದ್ಯಾಲಯದಲ್ಲಿ ಪದವೀಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದವರು. ರಾಜ್ಯಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಸಿಎ ಕೋಚಿಂಗ್ ನೀಡಿದವರು. ಸಿಎ ಕಲಿಯಲು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಉಚಿತ ಶಿಕ್ಷಣ ನೀಡುತ್ತ ಬಂದಿದ್ದಾರೆ. ಕ್ಯಾಪ್ಸ್ ಫೌಂಡೇಷನ್ ಸ್ಥಾಪಿಸಿ ಸಾವಿರಾರು ಶಾಲೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಾನಾ ಕೊಡುಗೆಗಳನ್ನು ನೀಡಿದವರು. ಕಟೀಲು, ಕೋಟ, ರಾಮಕುಂಜ ವಿದ್ಯಾಲಯಗಳಲ್ಲಿ ವಿಜ್ಞಾನವನ ಸ್ಥಾಪಿಸಿದ್ದಾರೆ. ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲಿ ಬಳಸಬೇಡಿ, ಅಂಗಡಿಗಳಿಂದ ಸಾಮಾನು ತರಲು ಪ್ಲಾಸ್ಟಿಕ್ ಚೀಲ ಬಳಸಬೇಡಿ ಎಂದು ಜಾಗೃತಿ ಮೂಡಿಸುತ್ತ, ವಿದ್ಯಾರ್ಥಿಗಳಿಗೆ ಸ್ಟೀಲಿನ ಬಾಟಲಿ, ನಾನಾ ದೇವಸ್ಥಾನಗಳಲ್ಲಿ ಬಟ್ಟೆ ಚೀಲಗಳನ್ನು ವಿತರಿಸಿ ಜಾಗೃತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.