ಜ.19 - 20 ಗುರುಪುರ ಗೋಳಿದಡಿಗುತ್ತಿನಲ್ಲಿ ಗುತ್ತುದ ವರ್ಷದ ಪರ್ಬೊ
Monday, November 18, 2024
ಕೈಕಂಬ : ಗುರುಪುರ ಗೋಳಿದಡಿಗುತ್ತಿನಲ್ಲಿ 2025ರ ಜನವರಿ 19 ಮತ್ತು 20ರಂದು ವಾರ್ಷಿಕ `ಗುತ್ತುದ ವರ್ಸೊದ ಪರ್ಬೊ'ವು ದೈವಾರಾಧನೆ, ದೀಪಾರಾಧನೆ, ಯಕ್ಷಗಾನ ಸಹಿತ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸರಳ ರೀತಿಯಲ್ಲಿ ಜರುಗಲಿದೆ.
ಗುತ್ತಿನ ಚಾವಡಿಯಲ್ಲಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ ಗುತ್ತಿನ ಚಾವಡಿ ಮಿತ್ರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜನವರಿ 19 ಮತ್ತು 20ರಂದು ಹಿಂದಿನ ವರ್ಷದಂತೆ ಶ್ರೀ ವೈದ್ಯನಾಥ ಪಂಚ ದೇವತೆಗಳಿಗೆ ಪನಿವಾರ, ದೀಪಾರಾಧನೆ ಸಹಿತ ವಿವಿಧ ಆರಾಧನೆ, ನಿರಂತರ ಊಟೋಪಚಾರ ನಡೆಯಲಿದೆ.
ಜನವರಿ 19ರಂದು ರಾತ್ರಿ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ. 20ರಂದು ಸಂಜೆ 6ರಿಂದ ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕ್ ಹಾಗೂ ರಾತ್ರಿ 8:30ರಿಂದ ಠಾಕೂರ್‍ದಾಸ್ ಮತ್ತವರ ತಂಡದವರಿಂದ `ಏಕ್ ಶ್ಯಾಮ್ ರಫೀ ಕೇ ನಾಮ್' ಸಂಗೀತ ರಸಮಂಜರಿ ಜರುಗಲಿದೆ.
``ಮುಂದಿನ ಸಂವತ್ಸರದ ಆದಿ ಭಾಗದಲ್ಲಿ ಗೋಳಿದಡಿಗುತ್ತಿನಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಎನ್ನಲಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಸಂಭ್ರಮ ಆಚರಿಸುವುದಾಗಿ ಸಂಕಲ್ಪಿಸಿದ್ದೇವೆ. ಆದ್ದರಿಂದ 2025ರ ವಾರ್ಷಿಕ `ಗುತ್ತುದ ವರ್ಸೊದ ಪರ್ಬೊ'(ಹಬ್ಬ) ಅತಿ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ'' ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ತಿಳಿಸಿದರು.