-->


ರೋಶನ್ ನೆಲ್ಲಿಗುಡ್ಡೆ ನಿರ್ದೇಶನದ ಕೊಂಕಣಿ ಫಿಲ್ಮ್‌ನ "ಸೈತಾನಚೊ ಖೆಳ್" ಶೀರ್ಷಿಕೆ ಬಿಡುಗಡೆ

ರೋಶನ್ ನೆಲ್ಲಿಗುಡ್ಡೆ ನಿರ್ದೇಶನದ ಕೊಂಕಣಿ ಫಿಲ್ಮ್‌ನ "ಸೈತಾನಚೊ ಖೆಳ್" ಶೀರ್ಷಿಕೆ ಬಿಡುಗಡೆ

ಮಂಗಳೂರು : ಯುವ ಸಮುದಾಯವು ಹಾದಿ ತಪ್ಪುತ್ತಿದ್ದು ಅವರನ್ನು ತಿದ್ದುವ ಕೆಲಸ ಸಮಾಜದ ಎಲ್ಲಾ ವರ್ಗದ ಜನರ ಕರ್ತವ್ಯವಾಗಿದೆ. ಯುವ ಸಮಾಜಕ್ಕೆ ಜಾಗೃತಿ ಮೂಡಿಸುವ ಸಿನಿಮಾವು ಯಶಸ್ಸಾಗಲಿ, ಎಲ್ಲಾ ಸಮುದಾಯದ ಜನರೂ ಸಹ ಇಂತಹ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದು ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು ವ. ಫಾ.ಓಸ್ವಾಲ್ಡ್  ಮೊಂತೆರೋ ಹೇಳಿದರು. 
ಅವರು ಪತ್ರಕರ್ತರಾಗಿ, ಕಿರುತೆರೆಯ ನಿರ್ಮಾಣ, ನಿರ್ದೇಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೋಶನ್ ನೆಲ್ಲಿಗುಡ್ಡೆಯವರ ಚೊಚ್ಚಲ ನಿರ್ದೇಶನದ ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ನಿರ್ಮಾಣದ ಕೊಂಕಣಿ ಫಿಲ್ಮ್‌ನ "ಸೈತಾನಚೊ ಖೆಳ್"  ಟೈಟಲ್‌ನ್ನು ಕಿನ್ನಿಗೋಳಿ ಮೂರುಕಾವೇರಿಯ ಬಳಿಯ ನೆಲ್ಲಿಗುಡ್ಡೆ ರೋಡ್ರಿಗಸ್ ಕಾಂಪೌಂಡ್‌ನ ಆವರಣದಲ್ಲಿ  ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. 
ಈ ಸಂದರ್ಭದಲ್ಲಿ ಕಿನ್ನಿಗೋಳಿ ಸಂಜೀವಿನಿ ಸೇವಾ ಸಂಸ್ಥೆಯ ಆಗ್ನೆಸ್ ಫ್ರಾಂಕ್ ಬಿ.ಎಸ್., ಹಾಗೂ ನೆಲ್ಲಿಗುಡ್ಡೆ ಸೈಂಟ್ ಲಾರೆನ್ಸ್ ವಾರ್ಡಿನ ಅಧ್ಯಕ್ಷೆ ಎವುಜಿನ್ ಸಲ್ಡಾನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮಂಗಳೂರು ಉತ್ತರ ವಲಯದ ಕ್ಯಾಥೋಲಿಕ್ ಸಭಾದ ಅಧ್ಯಕ್ಷೆ ಮೆಲ್ರಿಡಾ ಜೇನ್ ರೋಡ್ರಿಗಸ್, ಕಿರೆಂ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿಕೋಸ್ತ, ಮಂಗಳೂರು ಕರ್ನಾಟಕ ಬ್ಯಾಂಕ್‌ನ ಓಸ್ವಾಲ್ಡ್ ಜೋಸೆಫ್ ಡಿಸೋಜಾ, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಪತ್ರಕರ್ತ ಕಲಾವಿದ ನರೇಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು. 
ಚಿತ್ರ ನಿರ್ಮಾಪಕ ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಸಿನಿಮಾ ನಿರ್ಮಾಣದ ಬಗ್ಗೆ ವಿವರಿಸಿದರು. ನಿರ್ದೇಶಕ ರೋಶನ್ ನೆಲ್ಲಿಗುಡ್ಡೆ ಅವರು ಸಿನಿಮಾದ ಉದ್ದೇಶ ಹಾಗೂ ಕಥಾ ಸಾರಾಂಶವನ್ನು ತಿಳಿಸಿದರು. 
ರೀನಾ ಡಿಸೋಜಾ ನೆಲ್ಲಿಗುಡ್ಡೆ ಸ್ವಾಗತಿಸಿದರು, ಜಾನೆಟ್ ಕುಟಿನ್ಹೋ ಕಜಗುರಿ ವಂದಿಸಿದರು, ಸಾನಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. 
 "ಸೈತಾನಚೊ ಖೆಳ್" ಕೊಂಕಣಿ ಸಿನಿಮಾ :    
ಹಾದಿ ತಪ್ಪುತ್ತಿರುವ ಇಂದಿನ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸುವ ಕಥಾನಕವೇ "ಸೈತಾನಚೊ ಖೆಳ್" ಸಿನಿಮಾದ ವಿಶೇಷತೆಯಾಗಿದೆ. ಈ ಸಿನಿಮಾ ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ತಮ್ಮ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಹರೀಶ್ ಪಿ. ಕೋಟ್ಯಾನ್, ಸಂಗೀತ ಡೊಲ್ವಿನ್ ಕೊಳಲ್ ಗಿರಿ, ಸಾಹಿತ್ಯ ವಿಲ್ಸನ್ ಕಟೀಲು, ಸ್ಕ್ರೀನ್ ಪ್ಲೇ ನೋರ್ಬಟ್ ಜಾನ್ ಮಂಗಳೂರು. ಸಂಕಲನ ದೇವಿಪ್ರಕಾಶ್ ಮಂಗಳೂರು, ಕಾರ್ಯಕಾರಿ ನಿರ್ಮಾಪಕರಾಗಿ ವಿನ್ಸೆಂಟ್ ಮಂಗಳೂರು, ನಿರ್ಮಾಣ ನಿರ್ವಹಣೆಯಲ್ಲಿ ವಿಲ್ಸನ್ ರೋಡ್ರಿಗಸ್ ಹಾಗೂ ಪಿಆರ್‌ಒ ಆಗಿ ನರೇಂದ್ರ ಕೆರೆಕಾಡು ಹಾಗೂ ಪ್ರಚಾರ ಕಾರ್ಯವನ್ನು ರಾಕೇಶ್ ಎಕ್ಕಾರು ಅವರ ಚಿಗುರು ಸಂಸ್ಥೆ ನಿರ್ವಹಿಸಲಿದೆ. ಸ್ಥಳೀಯ ಗ್ರಾಮೀಣ ಕಲಾವಿದರು ಹಾಗೂ ಹೊಸ ಮುಖಗಳು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಕಥೆ ಹಾಗೂ ನಿರ್ದೇಶನದ ಜವಬ್ದಾರಿ ಹೊತ್ತಿರುವ ರೋಶನ್ ನೆಲ್ಲಿಗುಡ್ಡೆ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article