ಅಕ್ಟೋಬರ್ 2ರಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ "ಗಲಾಟೆ ಸಂಸಾರ" ಧಾರಾವಾಹಿಯ ಶೀರ್ಷಿಕೆ ಹಾಡು ಬಿಡುಗಡೆ
Saturday, September 28, 2024
ಮೂಲ್ಕಿ : ಶ್ರೀಗುರುನಮನಸಂತೃಪ್ತಿ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ ಬಹು ನಿರೀಕ್ಷಿತ "ಗಲಾಟೆ ಸಂಸಾರ" ಕನ್ನಡ ಧಾರಾವಾಹಿಯ ಶೀರ್ಷಿಕೆ ಹಾಡನ್ನು ಅಕ್ಟೋಬರ್ 2ರಂದು ಸಂಜೆ 4ಕ್ಕೆ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅನಾವರಣಗೊಳ್ಳಲಿದೆ.
ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಈ ಧಾರಾವಾಹಿ ನಿರ್ಮಾಣವಾಗಿದ್ದು ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿರುವ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ವಿಶೇಷ ಸಹಕಾರದಲ್ಲಿ "ಗಲಾಟೆ ಸಂಸಾರ"ದ ಶೀರ್ಷಿಕೆ ಹಾಡು ಬಿಡುಗಡೆಗೊಳ್ಳಲಿದೆ.
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ ಬೆರ್ನಾಡ್ ಅವರು ಶೀರ್ಷಿಕೆ ಹಾಡನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಗುರುರಾಜ್ ಎಸ್. ಪೂಜಾರಿ ಅವರು ಈ ಸಂದರ್ಭದಲ್ಲಿ ಎರಡು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಅರುಣ್‌ಕುಮಾರ್, ಮಂಗಳೂರಿನ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಲ್ಯಾನ್ಸಿ ಕುವೆಲ್ಲೋ, ಪಡುಪಣಂಬೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮೋಹನ್‌ದಾಸ್, ಮಂಗಳೂರಿನ ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಅವರು ಭಾಗವಹಿಸಲಿದ್ದಾರೆ ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಶ್ರೀಗುರುನಮನಸಂತೃಪ್ತಿ ಸಂಸ್ಥೆಯ ಪಾಲುದಾರ ನರೇಂದ್ರ ಕೆರೆಕಾಡು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಗಲಾಟೆ ಸಂಸಾರ" ಕನ್ನಡ ಧಾರಾವಾಹಿ :
ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕಗುರುಗಳು, ಜ್ಯೋತಿಷ್ಯರು ಆಗಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಆಶೀರ್ವಾದದಿಂದ ನಿರ್ಮಾಣವಾಗಿರುವ "ಗಲಾಟೆ ಸಂಸಾರ" ಧಾರಾವಾಹಿಯನ್ನು ಮೂಲ್ಕಿಯ ನಮನ ಕಮ್ಯುನಿಕೇಶನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರಧಾನ ಪ್ರಾಯೋಜಕರಾಗಿ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಕೈ ಜೋಡಿಸಿದೆ. ಕಥೆ-ಸಂಭಾಷಣೆಯನ್ನು ನರೇಂದ್ರ ಕೆರೆಕಾಡು ರಚಿಸಿದ್ದು, ಚಿತ್ರಕಥೆ, ಸಾಹಿತ್ಯ, ಸಂಕಲನದೊಂದಿಗೆ ದೇವಿಪ್ರಕಾಶ್ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕರಾಗಿ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಸಂಗೀತವನ್ನು ಗಗನ್ ಸುವರ್ಣ ಮೂಲ್ಕಿ, ಗಾಯಕರಾಗಿ ಜಿ.ಎಸ್.ದಿನೇಶ್ ಶೀರ್ಷಿಕೆ ಹಾಡನ್ನು ಹಾಡಿದ್ದಾರೆ. ಪಿಆರ್‌ಒ ಆಗಿ ಸೋನು ಕ್ರಿಯೇಶನ್ಸ್‌ನ ರೋಶನ್ ನೆಲ್ಲಿಗುಡ್ಡೆ, ಪ್ರಚಾರದಲ್ಲಿ ಚಿಗುರು ಸಂಸ್ಥೆಯ ರಾಕೇಶ್ ಎಕ್ಕಾರು, ವಿನ್ಯಾಸವನ್ನು ಮೂಲ್ಕಿಯ ಇಂಪ್ರೇಷನ್ ಸಂಸ್ಥೆ ನಿರ್ವಹಿಸಿದೆ. ಕಲಾವಿದರಾಗಿ ಸುರೇಶ್ ವರ್ಕಾಡಿ, ದೇವಿಪ್ರಕಾಶ್, ನರೇಂದ್ರ ಕೆರೆಕಾಡು, ಹರೀಶ್ ಪಿ. ಕೋಟ್ಯಾನ್, ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಪೂರ್ಣಿಮಾ ಸುರತ್ಕಲ್, ಕೃತಿಕಾ ಉಲ್ಲಂಜೆ, ನಾಗರಾಜ್ ಪೂಜಾರಿ ಬಪ್ಪನಾಡು, ಧರ್ಮಾನಂದ ಶೆಟ್ಟಿಗಾರ್, ವಿಲ್‌ಫ್ರೇಡ್ ಕೊಲ್ಲೂರು ಮತ್ತಿತರರು ಅಭಿನಯಿಸಿದ್ದಾರೆ.
"ನಮನ ಕಾಮಿಡಿ" ಛಾನೆಲ್‌ನ ಮೂಲಕ ಈ ಧಾರಾವಾಹಿ ಅತೀ ಶೀಘ್ರದಲ್ಲಿಯೇ ಪ್ರಸಾರಗೊಳ್ಳಲಿದೆ ಎಂದು ಶ್ರೀಗುರುನಮನಸಂತೃಪ್ತಿ ಸಂಸ್ಥೆಯು ತಿಳಿಸಿದೆ.