440 ಕೆವಿ ಸಾಮಾರ್ಥ್ಯದ ವಿದ್ಯುತ್ ಮಾರ್ಗದ ವಿರುದ್ದ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
Friday, September 13, 2024
ಕೈಕಂಬ:ಪಡುಬಿದ್ರಿಯಿಂದ ಕಾಸರಗೋಡಿಗೆ ವಿದ್ಯುತ್ ಸರಬರಾಜು ಮಾಡುವ ಉದ್ದೇಶಿತ 440 ಕೆವಿ ಸಾಮಾರ್ಥ್ಯದ ವಿದ್ಯುತ್ ಮಾರ್ಗದ ವಿರುದ್ದ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರದಂದು ಕುಪ್ಪೆಪದವಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು, ಏಳಿಂಜೆ ಹೋರಾಟ ಸಮಿತಿಯ ಸುಕೇಶ್ಚಂದ್ರ,ಇನ್ನ ಹೋರಾಟ ಸಮಿತಿಯ ಚಂದ್ರಶೇಖರ ಶೆಟ್ಟಿ, ವಿಟ್ಲ ಹೋರಾಟ ಸಮಿತಿಯ ರಾಜೀವ ಗೌಡ, ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಸುಭ್ರಮಣ್ಯ ಭಟ್, ರೈತ ಸಂಘದ ಸಲಹೆಗಾರ ಮುರುವ ಮಹಾಬಲ ಭಟ್ ಮೊದಲಾದವರು ಮಾತನಾಡಿದರು.
ನಂತರ ರೈತರ ಬೇಡಿಕೆ ಸಹಿತ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಕುಪ್ಪೆಪದವು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ವಿದ್ಯುತ್ ಮಾರ್ಗ ಕಾಮಗಾರಿ ನಡೆಸುತ್ತಿರುವ ಕಂಪನಿ ವಿರುದ್ದ ಭಿತ್ತಿಪತ್ರಗಳನ್ನು ಹಿಡಿದು ರೈತರು ಘೋಷಣೆಗಳನ್ನು ಕೂಗಿದರು.
ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ಕುಪ್ಪೆಪದವು ಪಂಚಾಯತ್ ಪಿಡಿಓ ಸವಿತಾ ಮಂದೊಲಿಕರ್ ಮತ್ತು ಮುತ್ತೂರು ಪಂಚಾಯತ್ ಪಿಡಿಓ ಪ್ರಮೋದ್ ನಾಯ್ಕ್, ಮನವಿ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಸಿರು ಸೇನೆಯ ಜಿಲ್ಹಾ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. ಹಸಿರು ಸೇನೆಯ ಸಂಚಾಲಕ ಶೇಖ್ ಅಬ್ದುಲ್ಲಾ ವಂದಿಸಿದರು.
ಉಡುಪಿ,ಮಂಗಳೂರು, ವಿಟ್ಲ ಮತ್ತು ಬಂಟ್ವಾಳ ಸಹಿತ ವಿವಿಧ ಕಡೆಗಳ ಹೋರಾಟ ಸಮಿತಿಗಳ ಪ್ರಮುಖರು, ರೈತರು ವಿದ್ಯುತ್ ಮಾರ್ಗದ ಸಂತ್ರಸ್ತರು ಭಾಗವಹಿಸಿದ್ದರು.