ಅನಾಥ ವ್ಯಕ್ತಿಗೆ ಸ್ನಾನ ಮಾಡಿಸಿ, ಊಟ-ಬಟ್ಟೆಬರೆ ನೀಡಿ ಚಿಕಿತ್ಸೆಗೆ ವೆನ್ಲಾಕ್‍ಗೆ ಸೇರಿಸಿದ ಉದ್ಯಮಿ ರಘು ಸಾಲ್ಯಾನ್
Sunday, August 18, 2024
ಕೈಕಂಬ : ಕೆಲವು ದಿನಗಳಿಂದ ವಾಮಂಜೂರು ಜಂಕ್ಷನ್‍ನಲ್ಲಿ ತಿರುಗಾಡುತ್ತ, ರಾತ್ರಿ ಹೊತ್ತು ಹತ್ತಿರದ ಕಟ್ಟಡ, ಬಸ್ ತಂಗುಗಾಣಗಳಲ್ಲಿ ನಿದ್ರಿಸುತ್ತಿದ್ದ ಅನಾಥ ವ್ಯಕ್ತಿಯೊಬ್ಬನನ್ನು ವಾಮಂಜೂರು ತಿರುವೈಲಿನ ಉದ್ಯಮಿ ರಘು ಸಾಲ್ಯಾನ್ ಮತ್ತು ಅವರ ನೇತೃತ್ವದ ಯುವ ತಂಡವೊಂದು ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಸಕಲೇಶಪುರದ ವಿಶ್ವನಾಥ ಎಂಬವರ ಪುತ್ರ ಸುರೇಶ್ ಎಂದುಕೊಂಡ ಆತ, ವಿವಾಹಿತನಾಗಿದ್ದು ಪತ್ನಿ ಇದ್ದಾರೆ. ಆಕೆಯ ಹೆಸರು ಮಮತಾ ಎಂದಾದರೆ, ದಂಪತಿಯ ಮಗು ತೀರಿಕೊಂಡಿತ್ತಂತೆ. ಮನೆಯಲ್ಲಿ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಕೆಲವು ವರ್ಷದ ಹಿಂದೆ ಮನೆಯವರು ಹೊಡೆದು ಮನೆಯಿಂದ ಹೊರದಬ್ಬಿದ್ದಾರಂತೆ.
ಸಕಲೇಶಪುರದವನಾಗಿದ್ದರೂ ಸ್ಪಷ್ಟವಾಗಿ ತುಳು ಮಾತನಾಡುವ ಸುಮಾರು 40-45 ವರ್ಷ ಪ್ರಾಯದ ಈತನ ಮೈಮೇಲೆ ಕೆಲವು ಗಾಯಗಳ ಗುರುತು ಕಂಡು ಬಂದಿದೆ. ಮುಗ್ಧನಂತೆ ಕಂಡು ಬಂದ ಸುರೇಶ್‍ನನ್ನು ರಘು ಸಾಲ್ಯಾನ್ ಅವರು ಮಾನವೀಯ ನೆಲೆಯಲ್ಲಿ ತನ್ನ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ, ಊಟ ಮಾಡಿಸಿ, ಉತ್ತಮ ಬಟ್ಟೆಬರೆ ನೀಡಿ ತಂಡದ ಸದಸ್ಯ ಹಾಗೂ ತಿರುವೈಲು ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ ಅವರ ಸಹಕಾರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಲ್ಯಾನ್ ತಂಡದಲ್ಲಿ ವಾಮಂಜೂರು ಶ್ರೀರಾಮ ಮಂದಿರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ದಿವ್ಯಜ್ಯೋತಿ, ಜೈಶಂಕರ ಮಿತ್ರ ಮಂಡಳಿಯ ಸದಸ್ಯ ಭಾವೀಶ್ ಇದ್ದರು.