ಅಪಾಯದಲ್ಲಿ ಬಳ್ಕುಂಜೆ ಫಲಿಮಾರ್ ಸಂಪರ್ಕ ಸೇತುವೆ -ದುರಸ್ತಿಗೆ ಆಗ್ರಹ
Friday, July 5, 2024
ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಲ್ಕಿ ಸಮೀಪದ ಬಳ್ಕುಂಜೆ- ಫಲಿಮಾರ್ ಸಂಪರ್ಕ ಸೇತುವೆ ಕುಸಿತದ ಭೀತಿಯಲ್ಲಿದ್ದು ಸ್ಥಳೀಯರ ದೂರಿನಂತೆ ಜಿಲ್ಲಾಡಳಿತ ಎಚ್ಚೆತ್ತು ಘನ ವಾಹನ ಸಂಚಾರ ನಿಷೇಧಿಸಲಾಗಿದೆ
ಸೇತುವೆಯ ಅಡಿ ಭಾಗದಲ್ಲಿ ಬೀಮ್ ಗಳ ಸಿಮೆಂಟಿನ ತುಂಡುಗಳು ಬೀಳುತ್ತಿದ್ದು ಕಬ್ಬಿಣದ ಸರಳುಗಳು ಕಾಣುತ್ತಿದೆ.
ಬಳ್ಕುಂಜೆ ಭಾಗದಿಂದ ಫಲಿಮಾರು, ಉಡುಪಿ ಕಾರ್ಕಳ ನಿಟ್ಟೆ, ಬೆಳ್ಮಣ್ ಕುದುರೆಮುಖ ಹೆಬ್ರಿ ಸಾಗರ ಮೊದಲಾದ ಕಡೆಗೆ ಬಹಳ ಹತ್ತಿರದ ರಸ್ತೆಯಾಗಿದ್ದು ಶಾಲಾ ಮಕ್ಕಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
1979-80ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ಈ ಸೇತುವೆ ಕಳೆದ 41 ವರ್ಷಗಳಿಂದ ಈ ಸೇತುವೆ ನಿರ್ವಹಣೆಯಾಗಿಲ್ಲ ,ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆಯಲ್ಲಿ ಭಾರವಾದ ವಾಹನಗಳು ಸಂಚರಿಸುವಾಗ ಭಾರಿ ಗಾತ್ರದ ಶಬ್ದ ಕೇಳಿ ಬರುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ.
ಈ ಬಗ್ಗೆ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು ಜಿಲ್ಲಾಡಳಿತದಿಂದ ಘನವಾಹನ ಸಂಚಾರ ನಿಷೇಧದ ಬಗ್ಗೆ ಪ್ರಕಟಣೆ ನೀಡಿ ಸ್ಥಳದಲ್ಲಿ ನಾಮ ಫಲಕ ಅಳವಡಿಸಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಸೇತುವೆ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಅಮರ್ ಕರ್ನೀರೆ ಒತ್ತಾಯಿಸಿದ್ದಾರೆ.