ಉಚಿತ ಮಾರ್ಗದರ್ಶನವೇ ಅತೀ ದೊಡ್ಡ ಸೇವೆ- ಶಿವಪ್ರಸಾದ್ ಹೆಗ್ಡೆ
Saturday, July 13, 2024
ಮೂಲ್ಕಿ: ಗ್ರಾಮೀಣ ಭಾಗದ ಕ್ಲಬ್‌ಗಳು ದೊಡ್ಡ ದೊಡ್ಡ ಸೇವೆಗಳನ್ನೇ ಮಾಡಬೇಕೆಂದಿಲ್ಲ. ಉಚಿತವಾಗಿ ಮಾರ್ಗದರ್ಶನ ನೀಡುವುದೂ ಅತೀ ದೊಡ್ಡ ಸೇವೆಯಾಗಿದೆ ಎಂದು ಲಯನ್ಸ್ ಮಾಜಿ ಪ್ರಾಂತೀಯ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಹೇಳಿದರು.ಅವರು
ಮೂಲ್ಕಿಯ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸಭಾಭವನದಲ್ಲಿ ಜು. 12ರಂದು ಸಂಜೆ ನಡೆದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ ಸ್ಪಯರ್ ಇದರ 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಯನ್ಸ್ ನಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿದ್ದು ಆರ್ಥಿಕವಾಗಿ ದುರ್ಬಲರಿಗೆ ನಮ್ಮಿಂದಾದ ನೆರವನ್ನು ನೀಡೋಣ, ಸಮಾಜಕ್ಕೆ ದಾರಿದೀಪವಾಗೋಣ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲಯನ್ಸ್ ಜಿಲ್ಲೆ 317ಡಿಯ ಕ್ಯಾಬಿನೆಟ್ ಮುಖ್ಯ ಸಂಯೋಜಕ ಓಸ್ವಾಲ್ಡ್ ಡಿಸೋಜ ಮಾತನಾಡಿ ಕೇವಲ ಎರಡು ವರ್ಷಗಳಲ್ಲಿ 12 ಎಂಜೆ ಎಫ್ ಮೂಲಕ 12ಸಾವಿರ ಡಾಲರ್ ದೇಣಿಗೆ ಬಪ್ಪನಾಡು ಲಯನ್ಸ್ ನಿಂದ ಸಂದಾಯವಾಗಿದೆ. ಇದರ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್- ಪ್ರತಿಭಾ ಹೆಬ್ಬಾರ್ ಕುಟುಂಬವೊಂದರಿಂದಲೇ ಅಂತರಾಷ್ಟ್ರೀಯ ಲಯನ್ಸ್ ದತ್ತಿನಿಧಿಗೆ ರೂ. 10ಸಾವಿರ ಡಾಲರ್ ದೇಣಿಗೆ ನೀಡಿರುವುದು ಈ ಕ್ಲಬ್ಬಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ನಿಕಟಪೂರ್ವ ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಅತ್ಯುತ್ತಮ ಕ್ಲಬ್ ಬ್ಯಾನರನ್ನು ಕ್ಲಬ್‌ಗೆ ಹಸ್ತಾಂತರಿಸಿದರು. 2025-26ನೇ ಸಾಲಿನ ನಿಯೋಜಿತ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಮಾಜಿ ಗವರ್ನರ್ ಆಲ್ವಿನ್ ಪ್ಯಾಟ್ರಿಕ್ ಪತ್ರಾವೊ, ಕ್ಲಬ್ ಸ್ಥಾಪಕ ಅಧ್ಯಕ್ಷರೂ ಆಗಿರುವ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಶುಭಾಶಂಸನೆಗೈದರು.
ಸೇವಾ ಕಾರ್ಯಕ್ರಮದ ಅಂಗವಾಗಿ ಪಿ.ಯು. ಪರೀಕ್ಷೆಯಲ್ಲಿ ರಾಜ್ಯದಲ್ಲಿ 8ನೇ ಸ್ಥಾನ ಮತ್ತು ನೀಟ್ ಪರೀಕ್ಷೆಯಲ್ಲಿ ಅತ್ಯುತ್ಯಮ ಸಾಧನೆ ಮಾಡಿರುವ ನಿಧಿ ಶರ್ಮ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಬಹುಮುಖ ಪ್ರತಿಭೆ ಭಾರ್ಗವಿ ಮಯ್ಯ, ಪತ್ರಕರ್ತ ಹಾಗೂ ಸಾಹಿತಿ ಮಿಥುನ್ ಉಡುಪ ಕೊಡೆತ್ತೂರು , ಫ್ಯಾಶನ್ ಕಲಾವಿದೆ ಹಾಗೂ ಕ್ಲಬ್‌ನ ಪ್ರಥಮ ಮಹಿಳೆ ಅಶ್ವಿನೀ ಶರ್ಮ ಅವರನ್ನು ಸನ್ಮಾನಿಸಲಾಯಿತು. ಉಮೇಶ್ ಕಾರಂತ ಮತ್ತು ಪದ್ಮನಾಭ ಭಟ್ ಅವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು. ನಡುಗೋಡು ಶಾಲೆಗೆ ಕಂಪ್ಯೂಟರ್ ಹಾಗೂ ಅಂಗರಗುಡ್ಡೆ ರಾಮ ಮಂದಿರಕ್ಕೆ ಕಾರ್ನೆಕ್ಸ್ ಮಿರರ್ ಕೊಡುಗೆಯಾಗಿ ನೀಡಲಾಯಿತು. ಮೊಹನ ಶೆಟ್ಟಿಯವರು ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಸಂತೋಷ್ ಕುಮಾರ್, ಕಲ್ಲಪ್ಪ ತಡವಲಗ ಮತ್ತು ಶ್ರೀವತ್ಸ ಉಪಾಧ್ಯಾಯ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ನಿರ್ಗಮನ ಅಧ್ಯಕ್ಷ ಸುಧೀರ್ ಬಾಳಿಗ ಸ್ವಾಗತಿಸಿದರು. ನೂತನ ಅಧ್ಯಕ್ಷ ಶಿವಪ್ರಸಾದ್ ಎಲ್ಲರ ಸಹಕಾರ ಕೋರಿದರು. ಶೋಭಾ ಶಿವಪ್ರಸಾದ್ ಹೆಗ್ಡೆ, ವಲಯಾಧ್ಯಕ್ಷರುಗಳಾದ ರೋಶನ್ ಡಿಸೋಜ, ಉಮೇಶ್ ಶೆಟ್ಟಿ, ಲಿಯೋ ಮಹಮ್ಮದ್ ಶರೀಫ್, ಪ್ರಾಂತ್ಯದ ವಿವಿಧ ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪುಷ್ಪರಾಜ್ ಚೌಟ ಅವರು ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ದೀಕ್ಷಾ ಸಸಿಹಿತ್ಲು ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಪ್ರಶಾಂತ್ ಶರ್ಮ ಪದಾಧಿಕಾರಿಗಳನ್ನು ಪರಿಚಯಿಸಿದರು. ವಿಶ್ವನಾಥ ಶೆಣೈ ಹೊಸ ಸದಸ್ಯರನ್ನು ಪರಿಚಯಿಸಿದರು. ನಿಧಿಶರ್ಮ ಪ್ರಾರ್ಥಿಸಿದರು. ಅನಿಲ್ ಕುಮಾರ್ ಧ್ವಜವಂದನೆ ನೆರವೇರಿಸಿದರು. ವೈಶಾಖ್ ಹೆಬ್ಬಾರ್ ಲಯನ್ಸ್ ನೀತಿ ಸಂಹಿತೆ ಪಠಿಸಿದರು. ವಿಶ್ವನಾಥ ಶೆಣೈ ಮತ್ತು ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಹೆಬ್ಬಾರ್ ವಂದಿಸಿದರು.