ಹಿರಿಯ ಸಾಹಿತಿ ಎಕ್ಕಾರು ಉಮೇಶ ರಾಯರ ಮನೆಗೆ ಕಸಾಪ ಜಿಲ್ಲಾಧ್ಯಕ್ಷರ ಭೇಟಿ
Monday, July 29, 2024
ಬಜಪೆ : ಸಾವಿರಾರು ಬರಹಗಳ ಮೂಲಕ ಸಾಹಿತ್ಯ ಸೇವೆ ಮಾಡಿರುವ ನಿವೃತ್ತ ಶಿಕ್ಷಕ, ಕೃಷಿಕ ಎಕ್ಕಾರು ಉಮೇಶ ರಾಯರ ಸಾಹಿತ್ಯ ಮತ್ತು ಕನ್ನಡ ಸೇವೆ ಅನುಪಮ. ಅನನ್ಯವಾದುದು ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು.
ಅವರು ಎಕ್ಕಾರಿನ ಹಿರಿಯ ಸಾಹಿತಿ ಉಮೇಶ ರಾವ್ ಅವರ ಮನೆಗೆ ಭೇಟಿ ನೀಡಿ, ಅವರನ್ನು ಗೌರವಿಸಿ ಮಾತನಾಡಿದರು.
ಉಮೇಶ ರಾಯರ ಸಂಗ್ರಹದ ಪುಸ್ತಕಗಳು ಪತ್ರಿಕೆಗಳನ್ನು ವೀಕ್ಷಿಸಿದ ಶ್ರೀನಾಥ್ ರಾಯರಿಗೆ ಸಂದಿರುವ ನೂರಾರು ಸಂಮಾನಗಳ ಜೊತೆಗೆ ಈ ಹಿಂದೆಯೇ ಸಾಹಿತ್ಯ ಪರಿಷತ್ತು ಗೌರವಿಸಿದೆ. ತಾನು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷನಾದ ಬಳಿಕ ಅನೇಕ ಹಿರಿಯ ಸಾಹಿತಿಗಳ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸುವ, ಅವರೊಂದಿಗೆ ಮಾತುಕತೆ ನಡೆಸಿ ಅವರ ಅನುಭವಗಳನ್ನು ಸಲಹೆಗಳನ್ನು ಕೇಳುತ್ತ ಬಂದಿದ್ದು, ವೃದ್ಧಾಪ್ಯದಲ್ಲಿರುವ ಸಾಹಿತಿಗಳೂ ಇದರಿಂದ ಸಂತಸ ಪಡುತ್ತಿದ್ದಾರೆ. ಉಮೇಶ ರಾಯರ ಮನೆಗೆ ಭೇಟಿ ನೀಡಿ ಗೌರವಿಸಲು ಹೆಮ್ಮೆಯಾಗುತ್ತಿದೆ ಎಂದರು.
ಸಾಹಿತಿ ಎಕ್ಕಾರು ಡಾ. ಪದ್ಮನಾಭ ಭಟ್, ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಉಮೇಶ ರಾಯರ ಸಾಧನೆಗಳ ಕುರಿತು ಮಾತನಾಡಿದರು.
ತನ್ನ ಸಂಗ್ರಹಣೆಯಲ್ಲಿರುವ ಪತ್ರಿಕೆಗಳ ವೀಕ್ಷಣೆಗೆ ಅನೇಕರು ಬಂದಿದ್ದಾರೆ. ಇದೀಗ ಕಸಾಪ ಜಿಲ್ಲಾಧ್ಯಕ್ಷರು ಮನೆಗೆ ಭೇಟಿ ನೀಡಿರುವುದು ಖುಷಿಯಾಗಿದೆ ಎಂದು ಉಮೇಶ ರಾವ್ ಹೇಳಿದರು.
ಹೆರಿಕ್ ಪಾಯಸ್, ಪುರುಷೋತ್ತಮ ಕೋಟ್ಯಾನ್, ಪ್ರಕಾಶ್ ಆಚಾರ್ , ಉಮೇಶ್ ರಾವ್ ಅವರ ಸಹೋದರಿ ಸುಕನ್ಯಾ ಉಪಸ್ಥಿತರಿದ್ದರು.