ಬಂಟ್ವಾಳ: ಬೈಕ್‌ಗೆ ಕಾರು ಡಿಕ್ಕಿ; ಸವಾರ ಮೃತ್ಯು
Monday, May 20, 2024
ಬಂಟ್ವಾಳ: ಬೈಕ್‌ಗೆ ಡಸ್ಟರ್ ಕಾರೊಂದು ಡಿಕ್ಕಿಹೊಡೆದು ದ್ವಿಚಕ್ರ ಸವಾರ ಮೃತಪಟ್ಟಿರುವ ಘಟನೆ ಬಿ.ಸಿ.ರೋಡ್ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಫಸ್ಟ್ ನ್ಯೂರೋ ಆಸ್ಪತ್ರೆ ಸಮೀಪ ಸೋಮವಾರ ನಡೆದಿದೆ.
ಘಟನೆಯಲ್ಲಿ ಹರೀಶ್ (46) ಮೃತಪಟ್ಟಿದ್ದು, ದ್ವಿಚಕ್ರ ವಾಹನ ಸಂಪೂರ್ಣ ಗೊಂಡಿದೆ ಎಂದು ತಿಳಿದು ಬಂದಿದೆ.
ಮೃತ ಹರೀಶ್ ಅವರು ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೆದ್ದಾರಿಯಾಗಿ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅನಿತಾ ಎಂಬವರು ಚಲಾಯಿಸುತ್ತಿದ್ದ ಕಾರು ಹಿಂದಿನಿಂದ ಬಂದು ಡಿಕ್ಕಿಹೊಡೆದಿದೆ ಎನ್ನಲಾಗಿದೆ.
ಘಟನೆಯಿಂದ ಹರೀಶ್ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು ಎನ್ನಲಾಗಿದ್ದು, ಸಾರ್ವಜನಿಕರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆ ರವಾನಿಸಿದ್ದಾರೆ. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ.
ಕಾರು ಚಾಲಕಿ ಅನಿತಾರವರು ದುಡುಕುತನ ಮತ್ತು ನಿರ್ಲಕ್ಷ ತನದಿಂದ ಕಾರು ಚಲಾಯಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಮೆಲ್ಕಾರ್ ನ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳದು ಬಂದಿದೆ.