ಕಂಬಳ ಕ್ರೀಡೆಗೆ ಸ್ವಯಂ ಚಾಲಿತ ಗೇಟ್ ವ್ಯವಸ್ಥೆ ಮತ್ತು ಫೋಟೋ ಫಿನಿಶ್ ,ಜಿಲ್ಲಾ ಕಂಬಳ ಸಮಿತಿ ತೀರ್ಮಾನ
Thursday, February 1, 2024
ಮಂಗಳೂರು : ಕಂಬಳದ ಸಮಯ ವ್ಯಯವಾಗದಂತೆ ತಡೆಯಲು ಮತ್ತು ನಿಖರ ಫಲಿತಾಂಶ ನೀಡಲು ಪ್ರಥಮ ಬಾರಿಗೆ ಕಂಬಳ ಕ್ರೀಡೆಗೆ ಸ್ವಯಂ ಚಾಲಿತ ಸಮಯ ಗೇಟ್ ವ್ಯವಸ್ಥೆ ಮತ್ತು ಫೋಟೋ ಫಿನಿಶ್ ಫಲಿತಾಂಶ ಅಳವಡಿಸಲು ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಪತ್ರಿಕಾ ಗೊಷ್ಠಿಯಲ್ಲಿ ಮಾಹಿತಿ ನೀಡಿದರು. ಫೆ. 3ರಂದು ನಡೆಯುವ ಐಕಳ ಬಾವ ಕಂಬಳದಲ್ಲಿ ಪ್ರಾಯೋಗಿಕವಾಗಿ ಇದು ಅನ್ವಯವಾಗಲಿದೆ. ಕ್ರಮೇಣ ಇದನ್ನು ಎಲ್ಲ ಕಂಬಳ ಗಳಿಗೂ ಅಳವಡಿಸಿ 2ದಿನ ನಡೆ ಯುತ್ತಿರುವ ಕಂಬಳವನ್ನು 30 ಗಂಟೆಗೆ ಸೀಮಿತಗೊಳಿಸಲಾಗುವುದು ಎಂದರು. ಈ ತಂತ್ರಜ್ಞಾನ ಅಳವಡಿಕೆಗೆ ಅದಾನಿ ಫೌಂಡೇಶನ್ 10 ಲಕ್ಷ ರೂ. ನೀಡಿದೆ. ಕಂಬಳ ಭವನ ನಿರ್ಮಾಣ ಸೇರಿದಂತೆ ಪೂರಕ ಕೆಲಸಗಳಿಗೆ ಸಂಬಂಧಿಸಿ ಪಿಲಿಕುಳದಲ್ಲಿ 2 ಎಕ್ರೆ ಜಾಗ ಮೀಸಲಿಡುವಂತೆ ಮತ್ತು ಪಿಲಿಕುಳದಲ್ಲಿ ಕಂಬಳ ಆಯೋಜನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು. ಚೆಕ್ ಅನ್ನು ಸಮಿತಿಗೆ ಹಸ್ತಾಂ ತರಿಸಿದ ಅದಾನಿ ಸಮೂಹ ಸಂಸ್ಥೆ ಯ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಕಂಬಳ ವಿಳಂಬ ಆಗುವುದನ್ನು ತಪ್ಪಿಸಲು ಈ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದರು.
ನಿಗದಿ ಪಡಿಸಿದ ಸೀಮಿತ ಅವಧಿಯೊಳಗೆ ಕೋಣ ಬಿಡದಿದ್ದರೆ ಗೇಟ್ ಬೀಳುತ್ತದೆ. ಇದಾದ 100 ಸೆಕೆಂಡಿನಿಂದ 10 ಸೆಕೆಂಡ್‌ವರೆಗೆ ಕೆಂಪು ದೀಪ, 10ರಿಂದ 1 ಸೆಕೆಂಡ್ ವರೆಗೆ ಹಳದಿ ದೀಪ ಬೆಳಗುತ್ತದೆ. 0 ಬಂದಾಕ್ಷಣ ಹಸಿರು ದೀಪ ಬೆಳಗಿ ಓಟಕ್ಕೆ ಗ್ರೀನ್ ಸಿಗ್ನಲ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣ ಓಟ ಆರಂಭಿಸಬೇಕು. ಇಲ್ಲದಿದ್ದಲ್ಲಿ ಆ ಕೋಣ ಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು. ಸ್ಪರ್ಧೆಯಲ್ಲಿರುವ ಕೋಣಗಳ ಮುಖ ಸ್ಕ್ಯಾನ್ ಮೇಲೆ ನಿಖರ ಫಲಿತಾಂಶವನ್ನು ಫೋಟೋ ಫಿನಿಶಿಂಗ್ ತಂತ್ರಜ್ಞಾನ ನೀಡಲಿದೆ.
ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಮಾಜಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ್ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಕೋಣಗಳ ಯಜಮಾನರಾದ ಶ್ರೀಕಾಂತ್ ಭಟ್, ಕಂಬಳ ವ್ಯವಸ್ಥಾಪಕ ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು.