ಶಿಮಂತೂರು ದೇವಳಕ್ಕೆ ಪಿ.ಜಿ ಅರ್ ಸಿಂಧ್ಯಾ ಭೇಟಿ
Sunday, January 28, 2024
ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ರಾಜ್ಯದ ಮಾಜೀ ಗೃಹ ಸಚಿವ ಹಾಗೂ ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಭೇಟಿ ನೀಡಿದರು.
ದೇವಳದ ಅರ್ಚಕ ಪುರುಷೋತ್ತಮ ಭಟ್ ಶ್ರೀದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ದೇವಸ್ಥಾನದ ವತಿಯಿಂದ ಮಾಜೀ ಸಚಿವರನ್ನು ಗೌರವಿಸಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ತೃಪ್ತಿಕರವಾಗಿದ್ದು ಇನ್ನಷ್ಟು ಜನಪರ ಕಾರ್ಯಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೂಚನೆ ನೀಡಿದರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ ಅವರು ತಮ್ಮ ಹಿಂದಿನ ರಾಜಕೀಯ ಮಿತ್ರರಾದ ಮಾಜೀ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಹಾಗೂ ಮಾಜೀ ಸಚಿವ ದಿ. ಅಮರನಾಥ ಶೆಟ್ಟಿ ರವರನ್ನು ನೆನಪಿಸಿಕೊಂಡರು.
ಸ್ಕೌಟ್ಸ್ ಅಂಡ್ ಗೈಡ್ಸ್ ಬಗ್ಗೆ ಮಾತನಾಡಿದ ಅವರು ಕರಾವಳಿ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸೀಸ್ ಸ್ಕೌಟ್ ಪ್ರಾರಂಭಿಸುವ ಆಲೋಚನೆ ಇದೆ,ಫೆ. 20 ರಿಂದ 23 ರವರೆಗೆ ಉಡುಪಿ ಜಿಲ್ಲೆಯ ಪಡುಬಿದ್ರೆಯಿಂದ ಮಲ್ಪೆಯವರೆಗೆ ಕರಾವಳಿ ಚಾರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮುಲ್ಕಿಯಲ್ಲಿ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು
ಈ ಸಂದರ್ಭ ವಿಷ್ಣುಮೂರ್ತಿ ಭಟ್, ಶಿಕ್ಷಕಿ ಕಾಮೇಶ್ವರಿ ಭಟ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರೂಪಾ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀಪತಿ ಪರೆಂಕಿಲ , ದೇವಸ್ಥಾನದ ಪ್ರಬಂಧಕ ಕಿಶೋರ್ ಶೆಟ್ಟಿ ,ಪತ್ರಕರ್ತ ಪುನೀತ್ ಕೃಷ್ಣ
ಉಪಸ್ಥಿತರಿದ್ದರು.