ಕಟೀಲು ಮೇಳ ಜ.14 ರಿಂದ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ತೀರ್ಮಾನ
Thursday, January 11, 2024
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಯಕ್ಷಗಾನ ಕಾಲಮಿತಿಗೆ ಒಳಪಟ್ಟಿದ್ದವು ಆದರೆ ಮಾನ್ಯ ಉಚ್ಛ ನ್ಯಾಯಾಲಯದ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ದೇವಳದ ಆಡಳಿತ ಮಂಡಳಿ ಸರ್ವಾನುಮತದ ನಿರ್ಣಯ ಕೈಗೊಂಡು ಈ ಹಿಂದಿನಂತೆ ಇಡೀ ರಾತ್ರಿ ಯಕ್ಷಗಾನ ಪ್ರದರ್ಶಿಸಲು ತೀರ್ಮಾನಿಸಿದೆ ಆದ್ದರಿಂದ ಜನವರಿ 14 ಮಕರ ಸಂಕ್ರಮಣದಿಂದ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತು ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ತಿಳಿಸಿದ್ದಾರೆ.
2020ರ ಆರಂಭದಲ್ಲಿ ಕೆಲ ದಿನ ಕಾಲಮಿತಿ ಪ್ರದರ್ಶನ ನಡೆದು ನಂತರದ ಪೂರ್ತಿ ತಿರುಗಾಟ ರದ್ದುಗೊಂಡು ಕ್ಷೇತ್ರದಲ್ಲಿ ಆರೂ ಮೇಳಗಳ ದೇವರಿಗೆ ಸಾಂಕೇತಿಕ ಪೂಜೆಗೆ ಸೀಮಿತಗೊಂಡಿದ್ದವು.
2020-21ರ ತಿರುಗಾಟದ ಆರಂಭದ ಕೆಲ ದಿನಗಳು ಕಾಲಮಿತಿಗೆ ಒಳಪಟ್ಟು ನಂತರದಲ್ಲಿ ಪತ್ತನಾಜೆವರೆಗಿನ ಪೂರ್ತಿ ಅವಧಿ ರಾತ್ರಿಯಿಡೀ ಪ್ರದರ್ಶನ ಕಂಡಿತ್ತು. ಈ ಬಾರಿ ಮೇಳ ತಿರುಗಾಟ ನಡೆಸಿ ಸುಮಾರು ಒಂದುವರೆ ತಿಂಗಳ ನಂತರ ಅಂದರೆ ಜನವರಿ 14 ರಿಂದ ಮತ್ತೆ ಬೆಳಗಿನವರೆಗೆ ಪ್ರದರ್ಶನ ಕಾಣಲಿದೆ. ಆದರೆ ಡಿ.8ರಿಂದ ಜ.13ರ ವರೆಗಿನ 47 ದಿನಗಳ ಆಟ ಕಾಲಮಿತಿಯ ಪ್ರದರ್ಶನಕ್ಕೆ ಬದ್ಧವಾಗಿದೆ.
ಚೌಕಿ ಪೂಜೆಯ ಸಮಯ ಬೆಳಗ್ಗೆ 6 ಗಂಟೆಗೆ, ಮಧ್ಯಾಹ್ನ 12.30ರಿಂದ 1.30, ರಾತ್ರಿ 8.30ಕ್ಕೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.