ಡಿ.27 -ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
Sunday, December 24, 2023
ಮೂಲ್ಕಿ : ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ೨೭ರ ಬುಧವಾರ ಕಾರ್ನಾಡಿನಲ್ಲಿ ಮೂಲ್ಕಿ ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಡಾ. ಗಣೇಶ್ ಅಮೀನ್ ಸಂಕಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಬೆಳಿಗ್ಗೆ ೯.೩೦ಕೆ ನಡೆಯಲಿದೆ. ಗಂಟೆ ೮.೧೫ಕ್ಕೆ ಕಾರ್ನಾಡು ಗಾಂಧಿ ಮೈದಾನದಿಂದ ಕಾಲೇಜು ಸಭಾಂಗಣದವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆಯ ಬಳಿಕ ಧ್ವಜಾರೋಹಣ ನಡೆಯಲಿದೆ. ಶಾಸಕ ಉಮಾನಾಥ ಕೋಟ್ಯಾನ್ ಸಮ್ಮೇಳನವನ್ನು, ಕೋಟ ಶ್ರೀನಿವಾಸ ಪೂಜಾರಿ ಪುಸ್ತಕಗಳನ್ನು, ದುಗ್ಗಣ್ಣ ಸಾವಂತರು ವಸ್ತು ಪ್ರದರ್ಶನವನ್ನು, ಉದ್ಘಾಟಿಸಲಿದ್ದಾರೆ. ದ.ಕ. ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯನುಡಿಗಳನ್ನಾಡಲಿದ್ದಾರೆ. ಮನೋಹರ ಶೆಟ್ಟಿ, ಡಾ.ಮುರಳಿ ಮೋಹನ ಚೂಂತಾರು ಮುಂತಾದವರು ಭಾಗವಹಿಸಲಿದ್ದಾರೆ. ಎಂದು ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದರು.
ಸಮ್ಮೇಳನದಲ್ಲಿ ಮೂಲ್ಕಿ ತಾಲೂಕಿನ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು ವಿಚಾರಗೋಷ್ಟಿಯಲ್ಲಿ ಡಾ.ಎನ್. ನಾರಾಯಣ ಶೆಟ್ಟಿ, ಶ್ರೀಧರ ಡಿ.ಎಸ್ ಹಾಗೂ ಗಣೇಶ ಕೊಲಕಾಡಿಯವರ ಬಗ್ಗೆ ನರೇಂದ್ರ ಕೆರೆಕಾಡು ಪರಿಚಯ ಮಾಡಲಿದ್ದು, ಅವರ ಪ್ರಸಂಗಗಳ ಹಾಡುಗಳನ್ನು ಐಕಳ ದೇವರಾಜ ಆಚಾರ್ಯ, ಭಾವಗೀತೆಗಳನ್ನು ಆಶ್ವೀಜಾ ಉಡುಪ ಹಾಡಲಿದ್ದಾರೆ., ಮೂಲ್ಕಿ ತಾಲೂಕಿನ ಸಾಹಿತಿಗಳು ವಿಚಾರಗೋಷ್ಟಿಯಲ್ಲಿ ಕಟೀಲು ಕಾಲೇಜಿನ ವಿದ್ಯಾರ್ಥಿ ಅನಿಕೇತ ಉಡುಪ ವಿಷಯ ಮಂಡನೆ ಮಾಡಲಿದ್ದು, ಮಧ್ಯಾಹ್ನ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡ ನಾಡುನುಡಿ ಆರಾಧನೆ ನಡೆಯಲಿದೆ. ಮಧ್ಯಾಹ್ನ ಮೂಲ್ಕಿ ತಾಲೂಕಿನ ಶಾಲೆಗಳು ಮತ್ತು ಉಳಿವು ವಿಚಾರಗೋಷ್ಟಿಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ವಿ.ಕೆ. ಯಾದವ್ ವಿಷಯ ಮಂಡನೆ ಮಾಡಲಿದ್ದಾರೆ. ಕವಿಸಮಯದಲ್ಲಿ ಶಕುಂತಲಾ ಭಟ್, ವಿಲ್ಸನ್ ಕಟೀಲು ಹಾಗೂ ದುರ್ಗಾಪ್ರಸಾದ ದಿವಾಣ ಇವರ ಕವನಗಳನ್ನು ಖ್ಯಾತ ಗಾಯಕ ರವೀಂದ್ರ ಪ್ರಭು ಮೂಲ್ಕಿ ಹಾಡಲಿದ್ದಾರೆ.
ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದವನ್ನು ವಾಮನ ಕರ್ಕೇರ ಕೊಲ್ಲೂರು ನಡೆಸಿಕೊಡಲಿದ್ದಾರೆ. ಸಂಮಾನ ಕಾರ‍್ಯಕ್ರಮದಲ್ಲಿ ನಾಟಕ ಕಿರುಕ್ಷೇತ್ರದ ಕೃಷ್ಣಮೂರ್ತಿ ಕವತ್ತಾರು, ಸಾಹಿತ್ಯ ಸಂಶೋಧನೆಗಾಗಿ ಡಾ. ಇಂದಿರಾ ಹೆಗ್ಡೆ, ಸಾಹಿತಿ ಉದಯಕುಮಾರ ಹಬ್ಬು, ಪತ್ರಿಕೆ ರಂಗಭೂಮಿಗಾಗಿ ಪರಮಾನಂದ ಸಾಲ್ಯಾನ್, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಬಪ್ಪನಾಡು ಯಕ್ಷಗಾನ ಕಲಾವೃಂದ ಇವರನ್ನು ಡಾ. ಹರಿಕೃಷ್ಣ ಪುನರೂರು ಸಂಮಾನಿಸಲಿದ್ದಾರೆ.
ಸಮಾಪನ ಕಾರ‍್ಯಕ್ರಮದಲ್ಲಿ ಸಾಂಸದ ನಳಿನ್ ಕುಮಾರ್. ಡಾ.ಕೆ.ಜಿ.ವಸಂತ ಮಾಧವ, ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ, ಡಾ. ಮಾಧವ ಎಂ.ಕೆ, ಡಾ.ಎಂ.ಪಿ.ಶ್ರೀನಾಥ್, ಶ್ರೀಮತಿ ಜ್ಯೋತಿ ಚೇಳಾಯರು, ಯದುನಾರಾಯಣಶೆಟ್ಟಿ, ಅತುಲ್ ಕುಡ್ವ, ಡಾ. ರುಡಾಲ್ಫ್ ನೊರೊನ್ಹ, ಹರಿಶ್ಚಂದ್ರ ಸಾಲ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ.
ಉದಯ ಕುಮಾರ ಹಬ್ಬು ಅವರ ಕೃತಿಗಳ ಬಿಡುಗಡೆ, ವಿವಿಧ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸ್ವದೇಶೀ, ಪರಿಸರ ಪೂರಕ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮಾರಾಟ ಸಮ್ಮೇಳನಕ್ಕೆ ಮೆರುಗು ನೀಡಲಿದೆ. ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ ತಿಳಿಸಿದರು.
ಸಮ್ಮೇಳನ ಸಮಿತಿಯ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಸಂಚಾಲಕ ಡಾ. ವಾಸುದೇವ ಬೆಳ್ಳೆ ಉಪಸ್ಥಿತರಿದ್ದರು.