ವೈಟ್ ಗ್ರೋ ಅಣಬೆ ಫ್ಯಾಕ್ಟರಿಯಿಂದ ಜನರಿಗೆ ಸಮಸ್ಯೆ ವಿರುದ್ದ ಹಾಗೂ ಮುಚ್ಚುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ
Monday, November 13, 2023
ವಾಮಂಜೂರು: ಅಣಬೆ ಬೆಳೆಸುವ ಪ್ರದೇಶದ ಸುತ್ತಮುತ್ತ ಬೀರುವ ದುರ್ನಾತದಿಂದ ಮಕ್ಕಳು, ವೃದ್ಧರು ಅನಾರೋಗ್ಯ, ಅಸ್ತಮದಂತಹ ರೋಗಕ್ಕೆ ತುತ್ತಾಗುತ್ತಿದ್ದು, ತತ್‍ಕ್ಷಣ ಇದನ್ನು ಮುಚ್ಚುವ ಬದಲು ಜನರ ಹೆಣದ ಮೇಲೆ ಹಣ ಮಾಡುವ ಆಸೆ ಯಾಕೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ತೀವ್ರ ಕ್ರೋಧ ವ್ಯಕ್ತ ಪಡಿಸಿದರು.
ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ವಾಮಂಜೂರಿನಲ್ಲಿ ಶನಿವಾರ ವೈಟ್ ಗ್ರೋ ಅಣಬೆ ಫ್ಯಾಕ್ಟರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆ ವಿರುದ್ದ ಹಾಗೂ ಮುಚ್ಚುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಮಸ್ಯೆ ಇಲ್ಲ ಎನ್ನುವ ಜಿಲ್ಲಾಧಿಕಾರಿ,ಮನಪಾ ಆಯುಕ್ತರು,ಅಧಿಕಾರಿಗಳು ಎರಡು ದಿನ ಫ್ಯಾಕ್ಟರಿ ಬಳಿ ವಾಸ್ತವ್ಯ ಹೂಡಬೇಕು. ಮಾಲಕರಾದ ಜೆ.ಆರ್ ಲೋಬೋ ಅವರು ಮಂಗಳೂರಿನಲ್ಲಿ ವಾಸ್ತವ್ಯ ಇರುವ ಬದಲು ಜನರ ಜತೆ ಇಲ್ಲಿ ವಾಸಿಸಬೇಕು. ಆಗ ಜನ ಹೇಳುವ ಸತ್ಯ ವಿಚಾರ ಅರಿವಾಗುತ್ತದೆ ಎಂದರು.
ರಾಜಕೀಯೇತರ ಹೋರಾಟಕ್ಕೆ ನಾವು ಇಷ್ಟು ದಿನ ಒತ್ತು ನೀಡಿದ್ದೆವು. ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಸ್ಥಗಿತಕ್ಕೆ ಆದೇಶಿಸಿದ್ದರು.
ಆದರೆ ಬದಲಾದ ಸರಕಾರದ ಈ ಅವಧಿಯಲ್ಲಿ ಮತ್ತೆ ಫ್ಯಾಕ್ಟರಿ ಆರಂಭವಾಗಿದೆ. ದುರ್ವಾಸನೆ ಬಾರದಂತೆ ಮಾಡುವುದಾಗಿ ಹೇಳಿದವರು ಮಾತನಾಡುತ್ತಿಲ್ಲ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಜೆಂಡಾ ಇಡಲೇ ಆಯುಕ್ತರು ಅಡ್ಡಿ ಪಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರು ಜನರ ಬೆಂಬಲಕ್ಕಿರುವ ಬದಲು ತಮ್ಮ ನಾಯಕನ ಬೆಂಬಕ್ಕೆ ನಿಂತಿದ್ದಾರೆ. ಬೇಕಾದ ಆಧಿಕಾರಿಗಳನ್ನು ಕರೆಸಿ ತಮಗೆ ಬೇಕಾದಂತೆ ನಡೆಸುಕೊಳ್ಳುತ್ತದೆ.
ಹೀಗಾಗಿ ಇದೀಗ ಬಿಜೆಪಿ ಪಕ್ಷದ ವತಿಯಿಂದ ಜನರ ಪರವಾಗಿ ಈ ಫ್ಯಾಕ್ಟರಿ ಮುಚ್ಚುವವರೆಗೆ ಪ್ರತಿಭಟನೆ ನಡೆಸುತ್ತದೆ. ನಾವೇ ಮುತ್ತಿಗೆ ಹಾಕುವ ಮೂಲಕ ಮುಚ್ಚುತ್ತೇವೆ.
*ಅಣಬೆ ಫ್ಯಾಕ್ಟರಿಯಿಂದ ಮಗು ಅಸ್ವಸ್ಥವಾಗಿದ್ದು ಮುಖಾಂತರ ಹಾಕಿದ್ದಕ್ಕೆ ಹಲವರ ಮೇಲೆ ಕೇಸು ದಾಖಲಾಗಿದೆ.ಬಲವಂತವಾಗಿ ಹೋರಾಟ ಹತ್ತಿಕ್ಕಲು , ಜನರ ಬಾಯಿ ಮುಚ್ಚಿಸಲು ಆಡಳಿತ ಯಂತ್ರದ ಬಳಕೆಯಾಗುತ್ತಿದೆ.ಇದಕ್ಕೆಲ್ಲಾ ಬೆದರುವ ಪ್ರಶ್ನೆಯಿಲ್ಲ. ಜನರ ಜೀವನದ ಪ್ರಶ್ನೆ ಇದು.
ನ್ಯಾಯಕ್ಕಾಗಿ ಹೋರಾಟ ಮಾಡಿದವರ ಮೇಲೆ ಕೇಸು ದಾಖಲಿಸುವುದಾದರೆ ದಾಖಲಿಸಲಿ.ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ನುಡಿದರು.
ವಕ್ತಾರ ಜಗದೀಶ ಶೇಣವ ಅವರು ಮಾತನಾಡಿ ,ಚಾಕಲೇಟ್ ಫ್ಯಾಕ್ಟರಿ ಎಂದು ಜನರನ್ನು ನಂಬಿಸಿ ಆರಂಭಿಸಿದರು. ಇದೀಗ ಜನರ ಜೀವನ ನರಕ ಮಾಡಿದ್ದಾರೆ. ರಾಜಸ್ಥಾನದಂತೆ ಹೆದ್ದಾರಿಯನ್ನು ದಿನಗಟ್ಟಲೆ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದರು.
ಹೇಮಲತಾ ರಘು ಸಾಲಿಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಠಾರಿ, ಉಪಮೇಯರ್ ಸುನಿತಾ, ಸಂದೀಪ್ ಪಚ್ಚನಾಡಿ, ಸ್ಥಾಯೀ ಸಮಿತಿ ಅಧ್ಯಕ್ಷ ರಾದ ಲೋಹಿತ್ ಅಮೀನ್ ,ವರುಣ್ ಚೌಟ, ಮಾಜಿ ಮೇಯರ್ ಜಯಾನಂದ ಅಂಚನ್, ಬಿಜೆಪಿಯ ಮನಪಾ ಸದಸ್ಯರು,ಬಿಜೆಪಿ ಮುಖಂಡರು,ಕಾರ್ಯಕರ್ತರು ,ಸ್ಥಳೀಯ ನಿವಾಸಿಗಳು ಮತ್ತಿತರರು ಉಪಸ್ಥಿರಿದ್ದರು.ಉಮೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು.
ಅಣಬೆ ಫ್ಯಾಕ್ಟರಿಯಿಂದ ನಮಗೆ ಯಾವ ರೋಗ ಆಂಟಿಕೊಳ್ಳುತ್ತದೋ ಎಂಬ ಭಯವಿದೆ.ದುರ್ವಾಸನೆ ಸಂದರ್ಭ ವಾಂತಿ ,ತಲೆ ನೋವು ಸಹಿತ ಮಾನಸಿಕವಾಗಿ ಆಘಾತವಾಗುತ್ತದೆ.ಏನಾದರೂ ಆದರೆ ಇದಕ್ಕೆ ಹೊಣೆ ಯಾರು.ಶೀಘ್ರ ಮುಚ್ಚುವಂತಾಗಬೇಕು ಎಂದು ಸ್ಥಳೀಯ ನಿವಾಸಿ
ಕಾರ್ಮಿನ್ ಲೋಬೋ ಒತ್ತಾಯಿಸಿದರು.