ನ. 11 - ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ 15ನೇ ವರ್ಷದ ಶ್ರೀ ವಿನಾಯಕ ಯಕ್ಷಕಲೋತ್ಸವ-2023 ಸಂಭ್ರಮ
Wednesday, November 8, 2023
ಕಿನ್ನಿಗೋಳಿ : ಕಳೆದ 15 ವರ್ಷದಿಂದ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಮೂಲಕ ಕರಾವಳಿ ಜಿಲ್ಲೆ ಸಹಿತ ಬೆಂಗಳೂರು, ಮೈಸೂರು, ಮುಂಬೈಯಂತಹ ನಗರಗಳಲ್ಲಿ ಯಕ್ಷಗಾನ ಪ್ರದರ್ಶನ ಮಾಡುವ ಪ್ರಭುದ್ಧ ತಂಡವಾಗಿರುವ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ 15ನೇ ವರ್ಷದ ಶ್ರೀ ವಿನಾಯಕ ಯಕ್ಷಕಲೋತ್ಸವ-2023 ಸಂಭ್ರಮವು. ನವೆಂಬರ್ 11ಕ್ಕೆ ನಡೆಯಲಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಜಯಂತ್ ಅಮೀನ್ ಕೆರೆಕಾಡು ತಿಳಿಸಿದ್ದಾರೆ.
ಅವರು ಕಿನ್ನಿಗೋಳಿಯ ಸ್ವಾಗತ್ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಾರ್ಯಕ್ರಮವು ಎಸ್‌ಕೋಡಿಯ ಪದ್ಮಾವತಿ ಲಾನ್‌ನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಉದ್ಘಾಟನೆಯೊಂದಿಗೆ ಗಣ್ಯರ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ನಡೆಯಲಿದೆ ಎಂದರು.
ಮೇಳದ ಸಂಚಾಲಕ ಅಭಿಜಿತ್ ಮಾಹಿತಿ ನೀಡಿ, ಶ್ರೀ ವಿನಾಯಕ ಮೇಳವು ಪ್ರಸ್ತುತ ವರ್ಷದಲ್ಲಿ 70ಕ್ಕೂ ಮಿಕ್ಕಿ ಯಕ್ಷಗಾನ ಪ್ರದರ್ಶನ ನೀಡಿದೆ. ಮುಂಬೈಯ 9ನೇ ವರ್ಷದ ಪ್ರವಾಸವು ಯಶಸ್ವಿಯಾಗಿ ಮುಗಿಸಿದ್ದೇವೆ, ಮುಂದಿನ ದಶಮಾನೋತ್ಸವ ಸಂಭ್ರಮದಲ್ಲಿ ಹತ್ತು ದಿನಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಲಿದ್ದೇವೆ ಎಂದರು.
ಮೇಳದ ಯಕ್ಷಗುರು ಅಜಿತ್ ಕೆರೆಕಾಡು ಮಾತನಾಡಿ, ಯಕ್ಷಕಲೋತ್ಸವದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸಹಿತ ಮೇಳದ 65ಕ್ಕೂ ಮಿಕ್ಕಿ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಹಿಮ್ಮೇಳದಲ್ಲಿಯೂ ಕಲಾವಿದರ ಸಂಗಮವಿದೆ. ಪೂರ್ವರಂಗ, ನಂದ ಮುಕುಂದ, ಕರುಣಾಳು ರಾಘವ, ಸಂಭವಾಮಿ ಯುಗೇ ಯುಗೇ, ವಾಸುದೇವ ಸರ್ವಂ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಉಷಾ ನರೇಂದ್ರ ಕೆರೆಕಾಡು, ಕಾರ್ಯದರ್ಶಿ ದುರ್ಗಾಪ್ರಸಾದ್, ಸದಸ್ಯರಾದ ಶ್ರೇಯಸ್ ರಾವ್ ಉಪಸ್ಥಿತರಿದ್ದರು.