ಗುರುಪುರ ಬೆಳ್ಳೂರುಗುತ್ತಿನ ಗರಡಿ ಮನೆತನದ ಸಾಂಪ್ರದಾಯಿಕ ಕಂಬಳ
Wednesday, November 8, 2023
ಗುರುಪುರ :ಗುರುಪುರ ಬೆಳ್ಳೂರುಗುತ್ತಿನ ಗರಡಿ ಮನೆತನದವರಿಂದ ಸುಮಾರು 250 ವರ್ಷಗಳಿಂದಲೂ ಮುಂದುವರಿಸಿ ಕೊಂಡು ಬಂದಿರುವ ಸಾಂಪ್ರದಾಯಿಕ ಬಾರೆಪಾಡಿ ಕಂಬಳದ ಜೊತೆಗೆ ಸಾಂಪ್ರದಾಯಿಕ ಕಂಬಳವು ಸಂಪ್ರದಾಯಬದ್ಧವಾಗಿ ಭಾನುವಾರದಂದು ನಡೆಯಿತು.
ಸಂಪ್ರದಾಯದಂತೆ ಕಂಬಳ ಗದ್ದೆಯ ಬದುಗಳಿಗೆ ಶೇಡಿ ಬಳಿಯಲಾಗುತ್ತದೆ. ಬೆಳ್ಳೂರುಗುತ್ತು ಗರಡಿಮನೆಯ ಕಂಬಳವು ನ.3 ರಂದು ಕುದಿ ಕಾರ್ಯಕ್ರಮದೊಂದಿಗೆ ಆರಂಭಗೊಂಡಿದ್ದು, ನ. 4ರಂದು ರಾತ್ರಿ `ಪನಿಕ್ ಕುಲ್ಲುನ' ಸಂಪ್ರದಾಯ ನಡೆಯಿತು.ಭಾನುವಾರದಂದು ಬೆಳಿಗ್ಗಿನಿಂದಲೇ ಕಂಬಳ ಗದ್ದೆಯಲ್ಲಿ ಕೋಣಗಳು ಓಡಿದವು. ಮೂಳೂರು ಮುಂಡಿತ್ತಾಯ ದೈವದ ಆರಾಧನೆಯೊಂದಿಗೆ ಸ್ಥಳೀಯ ಕೋರ್ದಬ್ಬು ದೈವದ ಪ್ರಾತಿನಿತ್ಯದಲ್ಲಿ ನಡೆಯುವ ದೈವಿಕ ಕಂಬಳವೂ ಇದಾಗಿದೆ . ಕಂಬಳ ಗದ್ದೆಯಲ್ಲಿ ಒಟ್ಟು 5 ಜೋಡಿ ಕೋಣ ಓಡಿಸಲಾಯಿತು.
ಆಧುನಿಕ ಕಂಬಳದಲ್ಲಿ ಪದಕಧಾರಿಯಾಗಿರುವ ಸ್ಥಳೀಯ ಕಾರಮೊಗರುಗುತ್ತಿನ ಜಗದೀಶ ಆಳ್ವರ 2 ಜೊತೆ ಕೋಣ, ಕಾಜಿಲ ಮಾತೃಕಪಾದ ರಾಜು ಪೂಜಾರಿ, ಬೊಂಡಂತಿಲ ತಾರಿಗುಡ್ಡೆಯ ಶಯನ್ ಸಾಹೇಬ್ ಮತ್ತು ಬೊಂಡಂತಿಲ ಯುವ ಸಹೋದರರ ತಲಾ ಒಂದೊಂದು ಜೊತೆ ಕೋಣಗಳು ಕಂಬಳದಲ್ಲಿ ಪಾಲ್ಗೊಂಡಿದ್ದವು. ಕಂಬಳದಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಯಜಮಾನರನ್ನು ಗೌರವಿಸಲಾಯಿತು. ಇಲ್ಲಿ ಮೇಲ್ಭಾಗದಲ್ಲಿರುವ ಗದ್ದೆಯಲ್ಲಿ ಬೆಳಿಗ್ಗಿನ ಹೊತ್ತು ಕೋಣಗಳನ್ನು ಓಡಿಸಿದ ಬಳಿಕ ಭತ್ತದ ನೇಜಿ ನೆಡಲಾಯಿತು. ಪಕ್ಕದ ಮತ್ತೊಂದು ಗದ್ದೆಯಲ್ಲಿ ಸಂಜೆ ಹೊತ್ತಿಗೆ ಸಾಂಪ್ರದಾಯಿಕ ಬಾರೆಪಾಡಿ ಕಂಬಳ ನಡೆಯಿತು.
ಬೆಳ್ಳೂರುಗುತ್ತು ಮನೆತನದ ರವೀಂದ್ರ ಶೆಟ್ಟಿ, ಯಶವಂತ ಶೆಟ್ಟಿ, ಬಾಬು ಅರ್ ಚೌಟ,ರಘು ಶೆಟ್ಟಿ ಪುಣೆ, ನವೀನ್ ಶೆಟ್ಟಿ, ದಿನೇಶ್ ಶೆಟ್ಟಿ, ಉದಯ ಶೆಟ್ಟಿ ಮತ್ತು ಬೆಳ್ಳಿಬೆಟ್ಟುಗುತ್ತು ರಮೇಶ್ ಹೆಗ್ಡೆ, ಏತಮೊಗರುಗುತ್ತು ಸದಾಶಿವ ಯಾನೆ ಜಯ ಶೆಟ್ಟಿ, ಸುಳ್ಯಗುತ್ತು ಸುಬ್ಬಯ್ಯ ಶೆಟ್ಟಿ, ಹರಿಕೇಶ್ ಶೆಟ್ಟಿ ನಡಿಗುತ್ತು, ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಜಯರಾಮ ಶೆಟ್ಟಿ ಉಳಾಯಿಬೆಟ್ಟು, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಜಯರಾಮ ಶೆಟ್ಟಿ `ವಿಜೇತ' ಕೈಕಂಬ, ದೇವಿಪ್ರಸಾದ್ ಶೆಟ್ಟಿ ಕಾರಮೊಗರುಗುತ್ತು, ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು ಹಾಗೂ ಸುತ್ತಲ ಪ್ರದೇಶದ ಗುತ್ತುಮನೆತನದವರು, ಮೂಳೂರು-ಅಡ್ಡೂರು ಗ್ರಾಮಸ್ಥರು, ಕಂಬಳ ಪ್ರಿಯರು ಇದ್ದರು.