ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ ಕಾಮಗಾರಿ ಶೀಘ್ರ ಆರಂಭ – ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್
Saturday, September 9, 2023
ಮಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಪ್ರಾದೇಶಿಕ ಕೇಂದ್ರದ ನಿರ್ಮಾಣಕ್ಕೆ ಕಾಮಗಾರಿ ಟೆಂಡರ್ ಶೀಘ್ರವೇ ಕರೆದು ಆರಂಭಿಸಲು ಆದೇಶಿಸಿರುವುದಾಗಿ ರಾಜ್ಯ ವೈದ್ಯಕೀಯ,ಕೌಶಲ್ಯಾಭಿವೃದ್ಧಿ ,ಉದ್ಯಮಶೀಲತಾ ಇಲಾಖೆಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸರಕಾರಕ್ಕೆ ಮಾಡಿದ ಮನವಿ ಮೇರೆಗೆ ಶುಕ್ರವಾರ ಮೇರಿಹಿಲ್‍ನಲ್ಲಿ ವಿ.ವಿ ಪ್ರಾದೇಶಿಕ ಕೇಂದ್ರದ ಸ್ಥಾಪನೆಗೆ ಕಾದಿರಿಸಲಾದ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮಾಹಿತಿ ನೀಡಿ, ಎರಡು ವರ್ಷದ ಹಿಂದಿನ ಸರಕಾರದ ಅವಧಿಯಲ್ಲಿ ಈ ಜಾಗವನ್ನು ಕಾದಿರಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.ಕಾಮಗಾರಿ ಆರಂಭಿಸುವುದಷ್ಟೇ ಈಗಿನ ಕೆಲಸವಾಗಿದೆ. 40 ಕೋಟಿ ರೂ. ಯೋಜನೆ ಇದಾಗಿದೆ. ಪ್ರಾದೇಶಿಕ ಕೇಂದ್ರದ ಜತೆ, ಕೌಶಲ್ಯಾಭಿವೃದ್ಧಿ ಕೇಂದ್ರ,ಸ್ಪೋಟ್ರ್ಸ್ ಸೆಂಟರ್ ಸಹಿತ ಹಲವು ಸೌಲಭ್ಯವಿದೆ.
ಮಂಗಳೂರು ಪ್ರಾದೇಶಿಕ ಕೇಂದ್ರದಿಂದ ದ.ಕ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಪ್ರದೇಶದ ವಿದ್ಯಾರ್ಥಿಗಳಿಗೆ ಬಹುಪ್ರಯೋಜನಕಾರಿಯಾಗಲಿದೆ ಎಂದರು.
ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಿ ಜತೆಗಿದ್ದ ಆರ್‍ಜಿಯುಎಚ್‍ಎಸ್‍ನ ವೈಸ್ ಚಾನ್ಸಲರ್ ಡಾ.ರಮೇಶ್ ಎಂ.ಕೆ ಅವರಿಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಸೆನೆಟ್ ಸದಸ್ಯರಾದ ಡಾ.ಶಿವಶರಣ್ ಶೆಟ್ಟಿ ,ಡಾ.ಶರಣ್ ಶೆಟ್ಟಿ ಅವರು ನಿಗದಿತ ಕಾಲಮಿತಿಯೊಳಗೆ ಪ್ರಾದೇಶಿಕ ಕೇಂದ್ರದ ನಿರ್ಮಾಣಕಾಮಗಾರಿ ಮುಗಿಸುವಂತೆ ಮನವಿ ಮಾಡಿದರು.ಸಿಂಡಿಕೇಟ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.