-->

ಕಾಲೇಜು ವಿದ್ಯಾರ್ಥಿ ಸಾವು,ರಸ್ತೆ ತಡೆ ನಡೆಸಿ ಪ್ರತಿಭಟನೆ

ಕಾಲೇಜು ವಿದ್ಯಾರ್ಥಿ ಸಾವು,ರಸ್ತೆ ತಡೆ ನಡೆಸಿ ಪ್ರತಿಭಟನೆ


ಬಜಪೆ:ಖಾಸಗಿ ಬಸ್ ಬೈಕ್ ಗೆ ಡಿಕ್ಕಿಯಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಅವರು ಜೂ.5 ರಂದು ಸ್ಥಳದಲ್ಲೇ ಸಾವನ್ನಪ್ಪಿದ್ದು,ಖಾಸಗಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆಯ ವಿರುದ್ದ ನಾಗರೀಕ ಹಿತರಕ್ಷಣಾ ಸಮಿತಿ ಎಡಪದವು - ಮಿಜಾರು ಹಾಗೂ ವಿವಿಧ ಸಂಘಟನೆಗಳ  ವತಿಯಿಂದ ಬುಧವಾರದಂದು  ಎಡಪದವಿನ ಜಂಕ್ಷನ್ ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಗರೀಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ಅವರು ಖಾಸಗಿ ಬಸ್ ನ ಮಿತಿ ಮೀರಿದ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಕಾಲೇಜು ವಿದ್ಯಾರ್ಥಿಯ ಸಾವು ಸಂಭವಿಸಿದೆ.ಅಜಾಗರೂಕತೆಯ ಚಾಲನೆಯನ್ನು ಮಾಡಿದ  ಬಸ್ ಚಾಲಕನ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.ಮಿತಿ ಮೀರಿದ ಖಾಸಗಿ ಬಸ್ ಗಳ ಧಾವಂತದಿಂದ ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿದ್ದು,ಲಘು,ದ್ವಿಚಕ್ರ ಹಾಗೂ ಪಾದಚಾರಿಗಳಿಗೆ ಇದರಿಂದ ಭಯದ ವಾತವರಣ ಸೃಷ್ಠಿಯಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು  ಭೇಟಿ ನೀಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಅರ್ ಟಿಓ ಅಧಿಕಾರಿಗಳು ,ಜಿಲ್ಲಾಧಿಕಾರಿಯವರೊಂದಿಗೆ   ಬಸ್ ಗಳ ಮಾಲಕರುಗಳು ಹಾಗೂ ಸಂಬಂಧಪಟ್ಟವರು ಒಟ್ಟು ಸೇರಿ ಮಾತುಕತೆ ನಡೆಸುವಂತಹ ಅವಶ್ಯಕತೆ ಇದೆ.ನಿಯಮಗಳನ್ನು ಮೀರಿ ಚಾಲನೆಯನ್ನು ನಡೆಸುವಂತಹ ಚಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯ ನಂತರ   ತಪ್ಪಿತಸ್ಥ ಖಾಸಗಿ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಬಜಪೆ    ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಗುರುಕಾಂತಿ ಅವರಿಗೆ ಮನವಿಯನ್ನು ನೀಡಲಾಯಿತು.

ಖಾಸಗಿ ಬಸ್ ಗಳ ಮಿತಿ ಮೀರಿದ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ವಿರುದ್ದ ನಾಗರೀಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಮಾತ್ರವಲ್ಲದೆ ಈ ಭಾಗದಲ್ಲಿ ಸರಕಾರಿ ಬಸ್ ಗಳ ಒಡಾಟ ನಡೆಸಬೇಕು ಎಂಬ ಮಾತು  ನಾಗರೀಕರಿಂದ ಕೇಳಿ ಬಂದಿತು.


ಪ್ರತಿಭಟನೆಯಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ,ಎಡಪದವು ಗ್ರಾ.ಪಂ ಅಧ್ಯಕ್ಷ ಸುಕುಮಾರ್ ದೇವಾಡಿಗ,ನ್ಯಾಯವಾದಿ ವಿಜಯ ಗೌಡ ಶಿಬ್ರಿಕೆರೆ,ಎಡಪದವು ರಿಕ್ಷಾ -ಚಾಲಕ ಮಾಲಕರ ಸಂಘದ ಅಧ್ಯಕ್ಷ ಆನಂದ ದೇವಾಡಿಗ,ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ,ವಿಶ್ವಕರ್ಮ ಸಮಾಜದ ಅಧ್ಯಕ್ಷ ಆಶೋಕ್ ಆಚಾರ್ಯ,ಗ್ರಾ.ಪಂ ಸದಸ್ಯರುಗಳು,ವಿವಿಧ ಸಂಘಟನೆಗಳ ಪದಾಧಿಕಾರಿಗಳು  ಹಾಗೂ ನಾಗರೀಕರು ಪಾಲ್ಗೊಂಡಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807