ಇಂದು ತೋಕೂರಿನಲ್ಲಿ ನಾಗಮಂಡಲೋತ್ಸವ
Tuesday, May 23, 2023
ಕಿನ್ನಿಗೋಳಿ :ಜೀರ್ಣೋದ್ಧಾರಗೊಂಡಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮೇ.21 ರಂದು ಬ್ರಹ್ಮಕುಂಭಾಭಿಷೇಕ ಜರುಗಿದ್ದು,ಇಂದು ನಾಗಮಂಡಲೋತ್ಸವವು ನಡೆಯಲಿದ್ದು ಆ ಪ್ರಯುಕ್ತ ಸಕಲ ಸಿದ್ಧತೆಯನ್ನು ಮಾಡಲಾಗಿದೆ.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 37 ವರ್ಷಗಳ ಹಿಂದೆ ನಡೆದ ಬ್ರಹ್ಮಕಲಶೋತ್ಸದ ಸಂದರ್ಭದಲ್ಲಿ 1987ರ ಮೇ 6ರಂದು ನಡೆದಿದ್ದ ನಾಗಮಂಡಲೋತ್ಸವದ ಸುಧೀರ್ಘ ಕಾಲದ ನಂತರದಲ್ಲಿ ಇದೀಗ ಬಹು ಸಂಖ್ಯಾತ ಭಕ್ತರ ಆಶಯದಂತೆ ದೇವಳವು ನಡೆಸಲು ಉದ್ದೇಶಿಸಿರುವ ನಾಗಮಂಡಲೋತ್ಸವಕ್ಕೆ ದೇವಳದ ವಠಾರದಲ್ಲಿ ಯುವಕ ಸಂಘದ ಮುಂಭಾಗದಲ್ಲಿ ವಿಶಾಲವಾದ ಗದ್ದೆಯಲ್ಲಿ ಮಂಡಲವನ್ನು ರಚಿಸಿ ಸಜ್ಜುಗೊಳಿಸಲಾಗಿದೆ. ಮಳೆ ಬಂದಲ್ಲಿ ರಕ್ಷಣೆಗಾಗಿ ಕಬ್ಬಿಣದ ತಗಡಿನ ಶೀಟ್‌ಗಳನ್ನು ಅಳವಡಿಸಿದ್ದು, ಸುತ್ತಮುತ್ತ ಭಕ್ತರು ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ನಾಲ್ಕು ದಿಕ್ಕಿನಿಂದಲೂ ನೋಡುವಂತಹ ಅವಕಾಶ ನೀಡಲಾಗಿದೆ.
ಬೆಳಿಗ್ಗೆಯಿಂದ ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು, ಸಂಜೆ 6ಕ್ಕೆ ಹಾಲಿಟ್ಟು ಸೇವೆ , ರಾತ್ರಿ 9ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮುದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದಿಂದ ನಾಗಮಂಡಲೋತ್ಸವ ನಡೆಯಲಿದೆ.
ನಾಗಮಂಡಲೋತ್ಸವವು ಶ್ರೀ ಸುಬ್ರಹ್ಮಣ್ಯ ದೇವರಿಗೆ ಅತಿ ಪ್ರಿಯವಾದ ಸೇವೆಯಾದುದರಿಂದ ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಭಕ್ತರು ಸಾಕಷ್ಟು ವಾಹನಗಳಲ್ಲಿ ಆಗಮಿಸುವುದರಿಂದ ಐದು ದಿಕ್ಕಿನಲ್ಲಿ ದೇವಳವನ್ನು ಪ್ರವೇಶಿಸುವ ಪ್ರದೇಶಗಳಲ್ಲಿಯೇ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ನಾಗಮಂಡಲೋತ್ಸವವನ್ನು ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆಯನ್ನು ದೇವಳದಿಂದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ತಿಳಿಸಿದ್ದಾರೆ.