-->
ಎಕ್ಕಾರು: ಸಾಂಪ್ರದಾಯಿಕ ಪೂಕರೆ ಕಂಬಳ

ಎಕ್ಕಾರು: ಸಾಂಪ್ರದಾಯಿಕ ಪೂಕರೆ ಕಂಬಳ


 

ಬಜಪೆ:ಎಕ್ಕಾರು ಶ್ರೀ ಕೊಡಮಣಿತ್ತಾಯ   ದೈವಸ್ಥಾನಕ್ಕೆ ಸಂಬಂಧಪಟ್ಟ  ದೈವಗಳ ಭಂಡಾರಮನೆಯಾದ ಕಾವರಮನೆಯ ಕಂಬಳದ  ಗದ್ದೆಯಲ್ಲಿ ಸಾಂಪ್ರದಾಯಿಕ ಪೂಕರೆ ಕಂಬಳವು ಜರುಗಿತು. ಸದಾನಂದ ಮೊೖಲಿ ಅವರು  ಧಾರ್ಮಿಕ  ವಿಧಿವಿಧಾನಗಳನ್ನು ನೆರವೇರಿಸಿದರು. 
ಈ ಸಂದರ್ಭ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮಕಾವ), ರತ್ನಾಕರ ಶೆಟ್ಟಿ ಬಡಕರೆ, ಸಂಪತ್ ಶೆಟ್ಟಿ ನಡ್ಯೋಡಿಗುತ್ತು, ಮಹೇಂದ್ರ ಶೆಟ್ಟಿ ಕಾವರಮನೆ, ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಪ್ರವೀಣ ಆಚಾರ್ಯ, ಸದಸ್ಯ ಸುದೀಪ್ ಅಮೀನ್, ತಾ.ಪಂ. ಮಾಜಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

 

ಪೂಕರೆ ಕಂಬಳ ಆಚರಣೆ ಬಗ್ಗೆ :

ಸುಗ್ಗಿ ಬೆಳೆಯ ಪ್ರಾರಂಭದಲ್ಲಿ ಆಚರಿಸುವ ಪೂಕರೆ ಕಂಬಳವು  ಅತೀ ಪುರಾತನವಾದ ಕಂಬಳವಾಗಿದೆ. ಈ ಕಂಬಳವನ್ನು  ಇಂದಿಗೂ  ಎಕ್ಕಾರು  ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೂಕ್ತೇಸರರಾದ ಕಾವೆರಮನೆ ನಿತಿನ್ ಹೆಗ್ಡೆ (ತಿಮ್ಮ ಕಾವ) ಅವರು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.ಎಕ್ಕಾರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಭಂಡಾರಮನೆಯಾದ ಕಾವೆರ ಮನೆಯ ಮುಂದಿನ ಕಂಬಳದ ಗದ್ದೆಯಲ್ಲಿ ನಡೆಯುತ್ತದೆ.  ಗ್ರಾಮದ ಪೂರೋಹಿತರಾದ ವೇದಮೂರ್ತಿ ಹರಿದಾಸ ಉಡುಪರು ಸೂಚಿಸಿದ ದಿನದಂದು  ಕಾವರಮನೆಯಲ್ಲಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಪೂಕರೆ ಕಂಬಳವು  ನಡೆಯುತ್ತದೆ.


ಪೂಕರೆಗೆ ಮೊದಲು ಕಂಬಳದ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಹದಮಾಡಿ ಇಡಲಾಗುತ್ತದೆ. ಪೂಕರೆ ನಡೆಯುವ ದಿನ ಬೆಳ್ಳಿಗ್ಗೆ ಗ್ರಾಮಕ್ಕೆ ಸಂಬಂಧಪಟ್ಟ ವಿಶ್ವಕರ್ಮರು ಕಾವೆರ ಮನೆಗೆ ಬಂದು ಒಂದು ಅಡಿಕೆ ಮರವನ್ನು ಕಡಿದು ಅದರಿಂದ ಪೂಕರೆಯನ್ನು ನಿರ್ಮಿಸುತ್ತಾರೆ. ಪೂಕರೆಯ ತುದಿಗೆ ಹಲಸಿನ ಮರದಿಂದ ತಯಾರಿಸಿದ ಶಿಖರವನ್ನು ಇಟ್ಟು, ಕೇಪಳದ ಹೂ ಮತ್ತು ಹಿಂಗಾರದಿಂದ ಅದನ್ನು ಶೃಂಗಾರ ಮಾಡಲಾಗುತ್ತದೆ. ನಾಲ್ಕು ಕಡೆಗಳ ಗುರಿಕಾರರು, ಕ್ಷೇತ್ರಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಕಾವೆರ ಮನೆಗೆ ಆಗಮಿಸುತ್ತಾರೆ. ಬಂದ ಎಲ್ಲಾ ಜನರಿಗೂ ವೀಳ್ಯದೆಲೆ ಮತ್ತು ಅಡಿಕೆ ಕೊಟ್ಟು ಸ್ವಾಗತಿಸಲಾಗುತ್ತದೆ. ದೈವದ ಮುಂದೆ ಎಲ್ಲರೂ ನಿಂತು ಪ್ರಾರ್ಥನೆ ಮಾಡುತ್ತಾರೆ. ನಂತರ ವಾದ್ಯ, ಬ್ಯಾಂಡ್, ಡೋಲು ವಾದನದೊಂದಿಗೆ ಎಲ್ಲಾ ಜಾತಿಯವರು ಸೇರಿ ಪೂಕರೆಯನ್ನು ಹೆಗಲಲ್ಲಿ ಹೊತ್ತಕೊಂಡು ಕಂಬಳದ ಗದ್ದೆಯ ಕಡೆ ಸಾಗುತ್ತಾರೆ. ಗದ್ದೆಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಗದ್ದೆಯ ಮಧ್ಯ ಭಾಗದಲ್ಲಿ ಇರುವ ಏಕಶಿಲಾ ದಂಬೆಕಲ್ಲಿಗೆ ಇಟ್ಟು ಪ್ರದಕ್ಷಿಣೆ ಹಾಕುತ್ತಾರೆ ನಂತರ ಪೂಜೆ ಸಲ್ಲಿಸಿ ಪೂಕರೆಯನ್ನು ನೇರವಾಗಿ ದಂಬೆಕಲ್ಲಿನಲ್ಲಿ ನೆಡಲಾಗುತ್ತದೆ. ನಂತರ ಅತಿಕಾರ ಬಿದೆಯ ನೇಜಿಯನ್ನು ಗದ್ದೆಗೆ ನೆಡಲಾಗುತ್ತದೆ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯು ನಡೆಯುತ್ತದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ