ಗುರುಪುರ ಗೋಳಿದಡಿಗುತ್ತಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ
Sunday, August 10, 2025
ಕೈಕಂಬ:ಗುರುಪುರಗೋಳಿದಡಿಗುತ್ತಿನ ಚಾವಡಿಯಲ್ಲಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದಂತೆ ಆ. 9ರಂದು ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ರಕ್ಷಾಬಂಧನ ವಿಷಯದಲ್ಲಿ ಮಾತನಾಡಿ, ಪವಿತ್ರ ಕ್ಷೇತ್ರ ಶ್ರೀ ಗುರು ಮಹಾಕಾಲೇಶ್ವರನ ಬಯಲು ಆಲಯವಿರುವ ಇಲ್ಲಿ ನಡೆಯುವ ರಕ್ಷಾಬಂಧನಕ್ಕೆ ವಿಶೇಷತೆ ಇದೆ. ದೇಶದ ರಕ್ಷಣೆಗಾಗಿ ಹಿಂದೂಗಳು ರಕ್ಷೆ ಕಟ್ಟಿಕೊಳ್ಳಬೇಕು. ಈ ಮೂಲಕ ನಮ್ಮ ಧರ್ಮ ಗಟ್ಟಿಗೊಳಿಸಬೇಕು. ಪ್ರತಿಯೊಬ್ಬರಲ್ಲೂ ರಾಷ್ಟ್ರೀಯ ಭಾವನೆ ಮೂಡಬೇಕು. ಹಿಂದೂ ಧರ್ಮಕ್ಕೆ ಜಾತಿ ಇಲ್ಲ. ದೇಶದಲ್ಲಿ ಬ್ರಿಟಿಷರು, ಮೊಗಲರು ಜಾತಿ ಹುಟ್ಟುಹಾಕಿದರು ಎಂದರು.
ಗುತ್ತಿನ ಮನೆಯಲ್ಲಿರುವ ದೇವರು, ದೈವಗಳಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಚಾವಡಿಯಲ್ಲಿದ್ದವರೆಲ್ಲ ಪರಸ್ಪರ ರಕ್ಷೆ ಕಟ್ಟಿ, ತಿಲಕವಿಟ್ಟು ಸಂಭ್ರಮಿಸಿದರು. ಗುತ್ತುಗಳ ಯಜಮಾನರು, ಗಡಿಕಾರರು, ಹಿರಿಯ ನಾಗರಿಕರು, ಚಾವಡಿ ಮಿತ್ರರು, ಹಿತೈಷಿಗಳು ಇದ್ದರು. ಸುನಿಲಾ ಪಿ. ಶೆಟ್ಟಿ ಗುಡ್ಡೆಗುತ್ತು ಅವರು ನಿರೂಪಿಸಿದರು.