ಯುವ ಜನತೆಗೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅನಿವಾರ್ಯ - ಗಿರೀಶ್ ಕುಮಾರ್ ಎಂ.
Wednesday, July 30, 2025
ಕಿನ್ನಿಗೋಳಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಯೋತಿ ಮಹಿಳಾ ಮಂಡಳಿ ಪದ್ಮನೂರು ಇವರ ನೇತೃತ್ವದಲ್ಲಿ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಜಪೆ ತಾಲೂಕು ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ ಅವರು ಇಂದಿನ ಯುವ ಜನತೆಗೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅನಿವಾರ್ಯವಾಗಿದೆ ಎಂದರು.ಅಲ್ಲದೆ ಅವರು ಕ್ಷೇತ್ರದ ಜನಸೇವೆಯ ಬಗ್ಗೆ ಮಾಹಿತಿ ನೀಡಿದರು.
ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಪ್ರಕಾಶ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು.
ಕಿನ್ನಿಗೋಳಿಯ ಉದ್ಯಮಿ ಪೃಥ್ವಿರಾಜ್ ಆಚಾರ್ಯ ಅವರು ತುಳುನಾಡಿನ ಜನಪದ ಆಟ ಚೆನ್ನೆಮನೆ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪದ್ಮನೂರಿನ ಹಿರಿಯ ಮಹಿಳೆ ಶ್ರೀಮತಿ ಕಮಲ ಇವರನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀಮತಿ ಆಶಾಲತಾ ಕೀರ್ತಿ ಶೆಟ್ಟಿ ಅವರು ತುಳುನಾಡಿನ ಆಚರಣೆ ಸಂಸ್ಕೃತಿ ಆಟಿದ ಮದೀಪು ನೀಡಿದರು.
ಸದಸ್ಯರು ಸುಮಾರು 30 ಬಗೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಯಾರಿಸಿ ಉಣ ಬಡಿಸಿದರು.
ಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸರಿತಾ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಶ್ರೀಮತಿ ಅನಿತಾ ಪೃಥ್ವಿರಾಜ್ ಧನ್ಯವಾದವಿತ್ತರು. ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.