ಯಕ್ಷ ಧ್ರುವ ಪಟ್ಲ ಫೌಂಡೇಷನ್ ದಶಮಾನೋತ್ಸವ ಸಂಭ್ರಮ, 2158 ಕಲಾವಿದರಿಗೆ ಅಂಚೆ ಅಪಘಾತ ವಿಮಾ ಸುರಕ್ಷೆ
Friday, June 6, 2025
ಮಂಗಳೂರು: ಜೂ.1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷ ಧ್ರುವ ಪಟ್ಲ ಫೌಂಡೇಷನ್ ನ ದಶಮಾನೋತ್ಸವದ ಅಂಗವಾಗಿ 2158 ಯಕ್ಷಗಾನ, ರಂಗಭೂಮಿ, ದೈವಾರಾಧನೆ ಮತ್ತು ಕಂಬಳ ಕಲಾವಿದರಿಗೆ ಅಂಚೆ ಅಪಘಾತ ವಿಮೆಯನ್ನು ಮಾಡಿಸುವ ಮೂಲಕ ಅವರ ಕುಟುಂಬಕ್ಕೆ ತಲಾ 10 ಲಕ್ಷದ ಸುರಕ್ಷತೆಯನ್ನು ಒದಗಿಸಲಾಯಿತು. ವಿಮಾ ಪ್ರೀಮಿಯಂ ನ್ನು ಪಟ್ಲ ಫೌಂಡೇಷನ್ ಪ್ರಾಯೋಜಿಸಿದ್ದು ಮಂಗಳೂರು ಅಂಚೆ ವಿಭಾಗದ ಸುಮಾರು 150 ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತು ಮತ್ತು ಸಂಯಮದಿಂದ ನಡೆಸಿಕೊಟ್ಟರು. ಕಳೆದ ಮೂರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆ ಯಕ್ಷ ಸಂಭ್ರಮದ ಈ ಜನಪರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದು ಈ ವರ್ಷ ಒಂದೇ ದಿನದಲ್ಲಿ 2158 ಕಲಾವಿದರಿಗೆ ಈ ಸೌಲಭ್ಯವನ್ನು ಒದಗಿಸಿ ನೂತನ ದಾಖಲೆಯನ್ನು ಮಾಡಿದೆ. ಈ ಎಲ್ಲಾ ಕಲಾವಿದರಿಗೆ ಸ್ಥಳದಲ್ಲೇ ಪಾಲಿಸಿ ಬಾಂಡ್ ಮುದ್ರಿಸಿ ನೀಡಿದ್ದು ವಿಶೇಷವಾಗಿತ್ತು.
ಈ ಅಂಚೆ ಅಪಘಾತ ವಿಮೆ ಭಾರತೀಯ ಅಂಚೆ ಇಲಾಖೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮತ್ತು ರಿಲಾಯನ್ಸ್ ಇನ್ಸೂರೆನ್ಸ್ ಕಂಪನಿಯ ಸೌಲಭ್ಯವಾಗಿದ್ದು ವರ್ಷಕ್ಕೆ ಕೇವಲ ರೂ.550 ಪ್ರೀಮಿಯಂ ಗೆ 10 ಲಕ್ಷದ ಸುರಕ್ಷತೆಯನ್ನ ಮಾತ್ರವಲ್ಲದೆ ಒಳರೋಗಿ/ಹೊರರೋಗಿ ಚಿಕಿತ್ಸೆ, ಶೈಕ್ಷಣಿಕ ವೆಚ್ಚದ ಮರುಪಾವತಿಯಂತಹ ಸೌಲಭ್ಯವನ್ನೂ ಒದಗಿಸುತ್ತದೆ. ಈ ವರ್ಷ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸುಮಾರು 11.87 ಲಕ್ಷ ರುಪಾಯಿ ವೆಚ್ಚದಲ್ಲಿ ಈ ಸೌಲಭ್ಯವನ್ನು ಕಲಾವಿದರಿಗಾಗಿ ಪ್ರಾಯೋಜಿಸಿದೆ. ಪಟ್ಲ ಫೌಂಡೇಷನ್ ಕಲಾವಿದರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅಂಚೆ ಅಪಘಾತ ವಿಮಾ ಯೋಜನೆ ಸರ್ವರ ಶ್ಲಾಘನೆಗೆ ಪಾತ್ರವಾಗಿದೆ. ಅಂಚೆ ಅಪಘಾತ ವಿಮಾ ಯೋಜನೆ ಮಳಿಗೆಗೆ ಭೇಟಿ ನೀಡಿದ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು, ನಟ ಅರವಿಂದ ಬೋಳಾರ್, ಕಂಬಳ ಅಕಾಡೆಮಿ ಅಧ್ಯಕ್ಷರಾದ ಗುಣಪಾಲ ಕಡಂಬ, ರಂಗಭೂಮಿ ಕಲಾವಿದ ಜೀವನ್ ರಾಂ ಸುಳ್ಯ, ಕದ್ರಿ ನವನೀತ್ ಶೆಟ್ಟಿ ಮತ್ತಿತರರು ಅಂಚೆ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸತತ ಮೂರನೇ ವರ್ಷ ಈ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಭಾರತೀಯ ಅಂಚೆ ಇಲಾಖೆಗೆ ವಹಿಸಿಕೊಟ್ಟ ಪಟ್ಲ ಫೌಂಡೇಷನ್ ನ ಅಧ್ಯಕ್ಷರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರನ್ನು ಮಂಗಳೂರು ಅಂಚೆ ವಿಭಾಗದ ವತಿಯಿಂದ ಹಿರಿಯ ಅಧೀಕ್ಷಕ ಎಂ. ಸುಧಾಕರ ಮಲ್ಯ ಸನ್ಮಾನಿಸಿ ಗೌರವಿಸಿದರು. ಉಪ ಅಧೀಕ್ಷಕ ಬಿ.ದಿನೇಶ್, ಸಹಾಯಕ ಅಧೀಕ್ಷಕ ಸಿ. ಪಿ. ಹರೀಶ್, ನಿರೀಕ್ಷಕ ಪ್ರದೀಪ್ ಭಂಡಾರಿ, ಮಾರುಕಟ್ಟೆ ಪ್ರತಿನಿಧಿಗಳಾದ ಸುಭಾಷ್ ಸಾಲಿಯಾನ್, ದಯಾನಂದ ಕತ್ತಲಸಾರ್, ಐಪಿಪಿಬಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ವರ್ಷ ಮಾಡಿಸಿದ ಪಾಲಿಸಿಗಳಲ್ಲಿ 9 ಕಲಾವಿದರಿಗೆ ಹೋರರೋಗಿ/ಒಳರೋಗಿ ಚಿಕಿತ್ಸೆಗಾಗಿ ರೂ.2.80ಲಕ್ಷದ ಪರಿಹಾರ ವಿತರಿಸಲಾಗಿದೆ. ಮೂರು ಕಲಾವಿದರು ಅಪಘಾತದಿಂದ ಮೃತಪಟ್ಟಿದ್ದು ಅವರ ಕುಟುಂಬಕ್ಕೆ 10 ಲಕ್ಷದ ಪರಿಹಾರದ ಕ್ಲೇಮ್ ಗಳು ಪ್ರಕ್ರಿಯೆಯಲ್ಲಿವೆ.