"ಚಿಣ್ಣರ ಚಿಲಿಪಿಲಿ " ಮಕ್ಕಳ ಆಟ- ಪಾಠ ಬೇಸಿಗೆ ಶಿಬಿರದ ಉದ್ಘಾಟನೆ
Sunday, May 18, 2025
ಬಜಪೆ:ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಗ್ರಾಮ ಶಾಖೆ ಎಕ್ಕಾರು ಹಾಗೂ ಜೀವ ನಿಧಿ ಟ್ರಸ್ಟ್ (ರಿ ) ಬಜ್ಪೆ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ 5 ದಿನಗಳ " ಚಿಣ್ಣರ ಚಿಲಿಪಿಲಿ " ಮಕ್ಕಳ ಆಟ- ಪಾಠ ಬೇಸಿಗೆ ಶಿಬಿರವನ್ನು ಕೆಂಚಗುಡ್ಡೆಯ ಅಂಬೇಡ್ಕರ್ ಭವನದಲ್ಲಿ ಆದಿತ್ಯವಾರದಂದು ಕೆಂಚಗುಡ್ಡೆ ವೈದ್ಯನಾಥೇಶ್ವರ ದೈವಸ್ಥಾನದ ಅಧ್ಯಕ್ಷ ರತ್ನಪ್ಪ ಅವರು ಡಾ.ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಉಧ್ಘಾಟಿಸಿದರು.
ಬಡಗ ಎಕ್ಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಅವರು ಶಿಬಿರಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ನು ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಮಕ್ಕಳು ರಜಾ ದಿನಗಳಲ್ಲಿ ಎಲ್ಲೆಂದರಲ್ಲಿ ಅಲೆದಾಡಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅವರ ಜ್ಞಾನ ಮಟ್ಟವನ್ನು ಬೆಳೆಸಬೇಕು. ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳಿಸಿಕೊಂಡರೆ ಮಾತ್ರ ದೇಶದ ಆಸ್ತಿಗಳಾಗಲು ಸಾಧ್ಯ. ವಿದ್ಯೆಯಿಂದ ಮಾತ್ರ ಸಮಾಜದಲ್ಲಿರುವ ತಾರತಮ್ಯವನ್ನು ನಿವಾರಿಸಿ ನಾರಾಯಣ ಗುರುಗಳ ಆಶಯದಂತೆ ಸ್ವತಂತ್ರರಾಗಲು ಸಾಧ್ಯ ಎಂದರು.
ಜೀವ ನಿಧಿ ಟ್ರಸ್ಟ್ (ರಿ )ಬಜ್ಪೆ ಯ ನಿರ್ದೇಶಕ ಜಯಂತ್ ಮಾತನಾಡಿ ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿವೆ ಅದನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲಿ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಬಹುದು. ಭವಿಷ್ಯದ ಭಾರತ ಕಟ್ಟುವಲ್ಲಿ ಇಂದಿನ ಮಕ್ಕಳ ಪಾತ್ರ ಪ್ರಮುಖವಾಗಲಿದೆ ಎಂದರು. ವಿದ್ಯಾರ್ಥಿ ನಾಯಕಿ ಕು. ಅಂಕಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಘು. ಕೆ. ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ದ. ಸಂ. ಸ. ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ, ಹಿರಿಯ ಕಾರ್ಯಕರ್ತೆ ಯಮುನಾ ಎಕ್ಕಾರು ಉಪಸ್ಥಿತರಿದ್ದರು. ಕು. ಸೌಜನ್ಯ ಸುರೇಶ್ ಕಾರ್ಯಕ್ರಮ ನಿರ್ವಹಿಸಿ, ಕು. ಕೃತಿಕಾ ಸ್ವಾಗತಿಸಿದರು. ಕು. ಪ್ರಣಮ್ಯ ಧನ್ಯವಾದವಿತ್ತರು.