ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾಸಂಘದ ಮಹಾಸಭೆ,ಸಾಧಕರಿಗೆ ಸನ್ಮಾನ
Tuesday, May 27, 2025
ಕೈಕಂಬ : ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಇದರ 5ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಸಭೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮವು ಗಂಜಿಮಠ ಮರಾಠಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೇಖರ ಕಡ್ತಲ ಅವರು ಸಾಧಕರನ್ನು ಗುರುತಿಸಿದಾಗ ಒಟ್ಟು ಸಮಾಜಕ್ಕೆ ಮರಾಠಿ ಸಮಾಜದ ಕೊಡುಗೆ ಏನೆಂಬುದು ಮನವರಿಕೆಯಾಗುತ್ತದೆ. ಸಂಘವು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ನೂತನ ಅಧ್ಯಕ್ಷ ಗುಣಪಾಲ ನಾಯ್ಕ್ ಅವರ ಕಾರ್ಯಾವಧಿಯಲ್ಲೂ ಈ ಕೆಲಸ ಮುಂದುವರಿಯಲಿ ಎಂದರು.
ಸಮಾರಂಭದಲ್ಲಿ ವಿಶ್ವನಾಥ ನಾಯ್ಕ್(ನಿವೃತ್ತ ಸಾರಿಗೆ ಅಧಿಕಾರಿ), ಪ್ರಭಾಕರ ನಾಯ್ಕ್(ನಿವೃತ್ತ ಯೋಧ), ಕಮಲಾ ಪಿ. ನಾಯ್ಕ್(ನಿವೃತ್ತ ವಿಮಾನ ನಿಲ್ದಾಣ ಉದ್ಯೋಗಿ), ಸಂಧ್ಯಾ ಜಿ.,(ನಿವೃತ್ತ ಬ್ಯಾಂಕ್ ಅಧಿಕಾರಿ), ಕ್ರೀಡಾಪಟು ಮಾ. ನಿಶಿತ್ ನಾಯ್ಕ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ದಿ. ಗುರಿಕಾರ ಪುತ್ತು ನಾಯ್ಕ್ ಮತ್ತು ದಿ. ಕಲ್ಯಾಣಿ ನಾಯ್ಕ್ ಒಡ್ಡೂರು ಸ್ಮರಣಾರ್ಥ ವಿ. ಪಿ. ನಾಯ್ಕ್ ಮಂಗಳೂರು ಇವರ ಕೊಡುಗೆಯಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ನಗದು ನೀಡಿ ಪುರಸ್ಕರಿಸಲಾಯಿತು. ಸಮಾಜದ ನವ ವಿವಾಹಿತ ದಂಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ಉಪ-ನಿರ್ದೇಶಕ ಪ್ರದೀಪ್ ಡಿ'ಸೋಜ, ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ ಎಂ., ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕಿ ಅಕ್ಕಮ್ಮ ಅವರು ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷ್ಣ ಭಟ್ ಕುಪ್ಪೆಪದವು ಇವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ವೃತ ನಡೆಯಿತು. ಸಂಘದ ಗೌರವಾಧ್ಯಕ್ಷ ವಿ. ಪಿ. ನಾಯ್ಕ್ ಮಂಗಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ನಾಯ್ಕ್ ಮುಚ್ಚೂರು ವರದಿ ಓದಿದರು. ಸಂಘದ ಮಹಿಳಾ ಘಟಕದ ಕಾರ್ಯದರ್ಶಿ ಶಿಕ್ಷಕಿ ನಿವೇದಿತಾ ಬೋರುಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ಶ್ರಾವ್ಯಾ ಅವರು ನಿರೂಪಿಸಿದರು. ಸಂಘದ ನೂತನ ಅಧ್ಯಕ್ಷ ಗುಣಪಾಲ ನಾಯ್ಕ್ ಅವರು ವಂದಿಸಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ರೋಹಿಣಿ ಜಿ., ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯೆಯರು ಹಾಗೂ ಸಮಾಜದ ನೂರಾರು ಮಂದಿ ಉಪಸ್ಥಿತರಿದ್ದರು.