-->


ಮೂಲ್ಕಿ ತಾಲೂಕಿನ ಗ್ರಂಥಪಾಲಕರಿಗೆ, ಪುಸ್ತಕಪ್ರಿಯರಿಗೆ ಸಂಮಾನ

ಮೂಲ್ಕಿ ತಾಲೂಕಿನ ಗ್ರಂಥಪಾಲಕರಿಗೆ, ಪುಸ್ತಕಪ್ರಿಯರಿಗೆ ಸಂಮಾನ




ಮೂಲ್ಕಿ : ನಾನು ಐವತ್ತು  ವರುಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಬಿಡುಗಡೆಗೊಳಿಸಿರಬಹುದು. ಸಾವಿರಾರು ಪುಸ್ತಕಗಳನ್ನು ಹಂಚಿದ್ದೇನೆ. ಇನ್ನೂ ಕೊಡಲು ಸಿದ್ಧನಿದ್ದೇನೆ. ಆಸಕ್ತಿ ಇರುವ ಶಾಲೆಗಳಿಗೆ ಹಂಚಲು ಸಿದ್ದನಿದ್ದೇನೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರು ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊತ್ತಗೆಯ ಹೊತ್ತು : ಪುಸ್ತಕ ಮನೆಯ ಕಷ್ಟಸುಖ ಗೋಷ್ಟಿಯಲ್ಲಿ ತಾಲೂಕಿನ ಎಲ್ಲ ಗ್ರಾಮಪಂಚಾಯತ್ ಹಾಗೂ ನಗರ ಪಂಚಾಯತ್‌ಗಳ ಗ್ರಂಥಪಾಲಕರು, ಪ್ರತಿ ಪಂಚಾಯತ್‌ನ ತಲಾ ಇಬ್ಬರು ಅತ್ಯುತ್ತಮ ಓದುಗರು ಹೀಗೆ ಮೂವತ್ತು ಮಂದಿಯನ್ನು ಗೌರವಿಸಿ ಮಾತನಾಡಿದರು.
ಓದಿನಿಂದ ನಮಗೆ ಸಂಸ್ಕೃತಿ ಸಿಗುತ್ತದೆ. ಜ್ಞಾನ ಸಿಗುತ್ತದೆ. ನಷ್ಟವಂತೂ ಇಲ್ಲ ಎಂದು ಡಾ. ಪ್ರಕಾಶ್ ಕಾಮತ್ ಏಳಿಂಜೆ  ಹೇಳಿದರು. ಓದಿಸುವುದು ಹೇಗೆ ಎಂಬುದು ಪ್ರಶ್ನೆ. ಗ್ರಂಥಾಲಯ ಕಲಿಕಾ ಕ್ಷೇತ್ರ. ಅಲ್ಲಿ ಓದುವ ಕುತೂಹಲ ಮೂಡಿಸುವ ಕೆಲಸ ಆಗಬೇಕು. ಹಲವಾರು ಚಟುವಟಿಕೆಗಳಾಗಬೇಕು. ಓದಿನ ಸುಖಕ್ಕಾಗಿ ಗ್ರಂಥಾಲಯಗಳ ಕೊಡುಗೆ ದೊಡ್ಡದು. ಪಂಚಾಯತ್ ಗ್ರಂಥಾಲಯದ ಹೆಸರು ಅರಿವು. ಜ್ಞಾನ ಹರಿಯುತ್ತಿರಬೇಕು ಸ್ಥಳೀಯ ಸಾಹಿತಿಗಳ ಕೃತಿಗಳೂ ಸಿಗುವಂತಾಗಬೇಕು ಎಂದು ಅವರು ಹೇಳಿದರು.
ಗ್ರಂಥಪಾಲಕರು ಹಾಗೂ ಓದುಗರು ಗ್ರಂಥಾಲಯಗಳ ಕಷ್ಟ ಸುಖಗಳ ಬಗ್ಗೆ ಮಾತನಾಡಿದರು. ಹೇಮಲತಾ ಶರ್ಮ ಮಾತನಾಡಿ ಆರನೆಯ ವಯಸ್ಸಿನ ಮಕ್ಕಳಿನಿಂದಲೇ ಓದುವ ಅವಕಾಶ ಅರಿವು ಕೇಂದ್ರದಿಂದ ಆರಂಭವಾಗಿದೆ. ಮಕ್ಕಳ ಸ್ನೇಹಿ ಗ್ರಂಥಾಲಯವನ್ನಾಗಿಸಲು ಡಿಜಿಟಲ್ ಅಳವಡಿಕೆ, ಬಸ್ ನಿಲ್ದಾಣದಲ್ಲಿ ಪುಸ್ತಕಗೂಡು ಹೀಗೆ ಪುಸ್ತಕ ಪ್ರೀತಿಗೆ ಸಾಕಷ್ಟು ಅವಕಾಶಗಳ ಪ್ರಯತ್ನ ನಡೆದಿದೆ ಎಂದರು.
ಓದುಗ ರವೀಶ್ ಕಾಮತ್ ಮಾತನಾಡಿ ತಲೆಬಗ್ಗಿಸಿ ಪುಸ್ತಕ ಓದಿದವರು ತಲೆ ಎತ್ತಿ ನಡೆಯುತ್ತಾರೆ ಎನ್ನುವುದಕ್ಕೆ ನನ್ನಂತಹವನೇ ಸಾಕ್ಷಿ. ಯುವ ಸಮೂಹ ಪುಸ್ತಕಗಳನ್ನು ಕರ್ತವ್ಯ, ಅಭಿಮಾನದಿಂದ ಓದುವುದನ್ನು ಮರೆತಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಅನೇಕ ಸಾಹಿತಿಗಳ ಕೃತಿಗಳು, ಪತ್ರಿಕೆಗಳನ್ನು ಓದಿದ್ದೇನೆ ಎಂದರು. ಲಿಡಿಯಾ ನಜರತ್, ನಂದಾ ಪಾಯಸ್, ರಮಣಿ, ವಿನುತಾ ಅತ್ತೂರು, ಸರೋಜಿನಿ ಮೆನ್ನಬೆಟ್ಟು ಮೊದಲಾದವರು ಗ್ರಂಥಾಲಯಗಳ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.
ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ವಂ. ಜೊಕಿಂ ಫೆರ್ನಾಂಡಿಸ್, ಕಟೀಲು ಪದವಿ ಕಾಲೇಜು ಗ್ರಂಥಪಾಲಕಿ ಸುಮಿತ್ರಾ ಪಕ್ಷಿಕೆರೆ, ಸಮ್ಮೇಳನಾಧ್ಯಕ್ಷ ಶ್ರೀಧರ ಡಿ.ಎಸ್. ಉಪಸ್ಥಿತರಿದ್ದರು. ಶ್ರೀಶ ಸರಾಫ್ ಐಕಳ ನಿರೂಪಿಸಿದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article