
ಗುರುಪುರ ಬಂಡಿಜಾತ್ರೆ ಆರಂಭ
ಕೈಕಂಬ:ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ `ಬಂಡಿ' ಜಾತ್ರೆಯು ಫೆ. 13ರಂದು ಧ್ವಜಾರೋಹಣ ನೆರವೇರುದರೊಂದಿಗೆ ಆರಂಭಗೊಂಡಿತು.
ಭಂಡಾರದ ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಆಗಮಿಸಿ ದೈವಸ್ಥಾನದಲ್ಲಿ ಸಾಂಪ್ರದಾಯಿಕ `ಗರಡೆ'ಯ ಧ್ವಜಾರೋಹಣ ನಡೆದ ಬಳಿಕ ಶ್ರೀ ಮುಂಡಿತ್ತಾಯ(ವೈದ್ಯನಾಥ) ಮತ್ತು ಧೂಮಾವತಿ ದೈವ ಪಾತ್ರಿಗಳ ದರ್ಶನ ನಡೆಯಿತು. ಕಂಚೀಲು ಸೇವೆ ಹಾಗೂ ಹಿರಿ-ಕಿರಿಯರ ಹರಕೆಯ ಉರುಳು ಸೇವೆ ನಡೆದ ಬಳಿಕ, ಅನ್ನಛತ್ರಕ್ಕೆ ತೆರಳಿದ ದೈವಗಳ ದರ್ಶನ ಪಾತ್ರಿಗಳು ಪಲ್ಲಪೂಜೆ ನೆರವೇರಿಸಿದರು.ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಮೈಸಂದಾಯ ಮತ್ತು ಮುಂಡಿತ್ತಾಯ ದೈವದ ನೇಮೋತ್ಸವ ಜರುಗಿತು. ಮುಂಜಾನೆ ಬಂಡಿ ರಥೋತ್ಸವ ನಡೆದ ಬಳಿಕ ದೈವಗಳಿಂದ ಸಾರ್ವಜನಿಕರಿಗೆ ಅಭಯ ಪ್ರದಾನ, ಪ್ರಸಾದ ವಿತರಣೆಯಾಯಿತು. ಈ ಸಂದರ್ಭದಲ್ಲಿ ಪ್ರಧಾನ ಗಡಿಕಾರ ಹಾಗೂ ಆನುವಂಶಿಕ ಆಡಳಿತ ಮೊಕ್ತೇಸರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ, ಗುತ್ತುಗಳ ಯಜಮಾನರು, ಆನುವಂಶಿಕ ಸೇವಾ ಮನೆತನದವರು, ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು ಮತ್ತು ಸಮಿತಿ ಸದಸ್ಯರು, ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಫೆ. 14ರಂದು ರಾತ್ರಿ 7ಕ್ಕೆ ಶ್ರೀ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ. ಫೆ. 15ರಂದು ರಾತ್ರಿ 7ಕ್ಕೆ ತುಡಾರ ಬಲಿ ಉತ್ಸವದೊಂದಿಗೆ ಧ್ವಜಾವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.