ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳಕ್ಕೆ ಚಾಲನೆ
Saturday, February 1, 2025
ಕಿನ್ನಿಗೋಳಿ :ಕಂಬಳವು ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು, ಕೃಷಿಗೆ ಪೂರಕವಾಗಿ ನಡೆಯುತ್ತಿದ್ದ ಕಂಬಳ ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಕ್ರೀಡೆಯಾಗಿದೆ. ಯುವಕರು ಉತ್ಸಾಹದಿಂದ ಕಂಬಳದಲ್ಲಿ ಪಾಲ್ಗೊಳ್ಳುತ್ತಿರುವುದು ಈ ಕ್ಷೇತ್ರ ಅಳಿಯದ ಸಂಪತ್ತಾಗಿದೆ ಎಂದು ಬೆಂಗಳೂರಿನ ಆಧ್ಯಾತ್ಮಿಕ ಗುರುಗಳಾದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಶನಿವಾರದಂದು ಐಕಳದಲ್ಲಿ 49ನೇ ವರ್ಷದ ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಕಂಬಳದ ಆರಂಭದಲ್ಲಿ ಐಕಳಬಾವದ ಮನೆಯಲ್ಲಿ ದೈವದ ಸನ್ನಿಧಾನದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಭವ್ಯ ಮೆರವಣಿಗೆಯಲ್ಲಿ ಕಂಬಳದ ಕರೆಯಲ್ಲಿ ಹಾಲು ಸುರಿದು ದೇವರ ಪ್ರಸಾದವನ್ನು ಸುರಿದು, ಪವಿತ್ರವಾದ ಅಶ್ವತ್ಥಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಹಿಂಗಾರವನ್ನು ಅರಳಿಸಿ ಕಂಬಳಕ್ಕೆ ಸಾಂಪ್ರದಾಯಿಕವಾಗಿ ಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಿದರು.
ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಮಹಾ ಪೋಷಕರ ನೆಲೆಯಲ್ಲಿ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ಸಿ. ಭಟ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ರವರನ್ನು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಗೌರವಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಾಮನ್ ಸಾಲ್ಯಾನ್ , ಬಾಲ ಪ್ರತಿಭೆ ಸ್ವಾತಿ ಪ್ರವೀಣ್ ಸಾಲ್ಯಾನ್, ಅನಂದ ಕೊಳಕೆ ಇರ್ವತ್ತೂರು
ರವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘದ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಕಟೀಲಿನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಿರೆಂ ಚರ್ಚ್ ನ ಧರ್ಮಗುರು ಓಸ್ವಾಲ್ಟ್ ಮೊಂತೆರೋ, ಶಾರದಮ್ಮ, ರಾಹುಲ್ ಭಟ್, ವಿಶ್ವನಾಥ ಭಟ್, ಉಷಾ, ವಿಮಾನ ನಿಲ್ದಾಣದ ವಿ.ಎಂ. ಜೋಶಿ, ಅದಾನಿ ಸಂಸ್ಥೆಯ ಕಿಶೋರ್ ಆಳ್ವಾ, ಸೌರಭ್ ಕೃಷ್ಣ ಶೆಟ್ಟಿ, ಸೂರಜ್ ಶೆಟ್ಟಿ, ಕೆಎಂಎಫ್ ನ ಕೆ.ಪಿ.ಸುಚರಿತ ಶೆಟ್ಟಿ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಸಂತೋಷ್ ಕುಮಾರ್ ಹಗ್ಡೆ, ಯುಗಪುರುಷದ ಭುವನಾಭಿರಾಮ ಉಡುಪ, ಸಮಿತಿಯ ಚಿತ್ತರಂಜನ್ ಭಂಡಾರಿ, ಸ್ವರಾಜ್ ಶೆಟ್ಟಿ ದೊಡ್ಡಮನೆ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕುಶಾಲ್ ಭಂಡಾರಿ ಮುಂಬೈ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಡಾ,ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು, ಸಾಯಿನಾಥ ಶೆಟ್ಟಿ, ಶ್ರೀಶ ಸರಾಫ್ ಐಕಳ ,ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.