ಪಂಚ ಭಾಷೆಗಳಲ್ಲಿ ಪ್ರಸಾರ ಕಂಡ ನಮ್ಮ ಶಾಲಾ ವಾರ್ತೆಗಳು
Monday, January 6, 2025
ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರಲ್ಲಿ ಆರಂಭಗೊಂಡಿದೆ ನ್ಯೂಸ್ ಚಾನೆಲ್. ಈ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ಐದು ಭಾಷೆಗಳಲ್ಲಿ ಸುದ್ದಿಗಳು. ಹೌದು ಈ ಶಾಲೆ ಇರುವುದು ಮಂಗಳೂರು ತಾಲೂಕಿನ ಎಕ್ಕಾರು ಎಂಬ ಗ್ರಾಮೀಣ ಪ್ರದೇಶದಲ್ಲಿ. ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಶಾಲೆಯಲ್ಲಿಯೇ ನ್ಯೂಸ್ ರೂಮನ್ನು ತೆರೆಯಲಾಗಿದ್ದು,"ಝೀರೋ ಬಜೆಟ್ ಪ್ರೋಗ್ರಾಮ್" ಅಗಿದೆ.ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದಲೇ ಆರಂಭವಾದ ನ್ಯೂಸ್ ಚಾನಲ್ ನ ಇದೀಗ ಶಾಲಾ ಪರಿಸರದಲ್ಲಿ ಬಳಕೆಯಾಗುವ ಐದು ಭಾಷೆಗಳನ್ನು ಬಳಸಿ ಸುದ್ದಿಯನ್ನು ಪ್ರಸಾರಮಾಡುತ್ತಿದೆ. ಜಿಲ್ಲೆಯಲ್ಲಿಯೇ ಸರಕಾರಿ ಪ್ರೌಢಶಾಲೆಯೊಂದು ಶೂನ್ಯ ವೆಚ್ಚದಲ್ಲಿ "ನಮ್ಮಶಾಲಾ ವಾರ್ತೆಗಳು" ಎಂಬ ಶೀರ್ಷಿಕೆ ಅಡಿ ದಾಖಲೀಕರಣ ಮಾಡಿದ್ದು,ಇದರಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮ ಭಾಗವಹಿಸುವಿಕೆ ಮುಖ್ಯವಾಗಿದೆ.
ತರಗತಿಯ ಬೋಧನೆ ಮತ್ತು ಕಲಿಕೆಗೆ ಅಡ್ಡಿಯಾಗದಂತೆ ದೃಶ್ಯೀಕರಣ, ವಿಷಯಗಳ ಕ್ರೋಡೀಕರಣ ಮಾಡಿ ಸಂಗ್ರಹ , ತಿಂಗಳಿನಲ್ಲಿ ಶಾಲಾ ಸಾಧನೆಗಳು, ವಿದ್ಯಾರ್ಥಿಗಳ ಸಾಧನೆಗಳು, ಶಿಕ್ಷಕರ ವಿಷಯ ಸಂಪನ್ಮೂಲಗಳ ಸಮಗ್ರ ವಿವರಗಳನ್ನು ಒಟ್ಟು ಗೂಡಿಸಿ ಚಿತ್ರೀಕರಣ ಮಾಡಿ ಸಂಭಾಷಣೆ, ಸಂದರ್ಶನ, ಗಳನ್ನೊಳಗೊಂಡು ವಾರ್ತೆಯನ್ನು ಪ್ರಸಾರ ಮಾಡಲಾಗುತ್ತದೆ.
ಶಾಲಾ ವಾರ್ತಾ ಪ್ರಸಾರವು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕನ್ನಡ ಭಾಷೆ, ಆಗಸ್ಟ್ ನಲ್ಲಿ ಇಂಗ್ಲಿಷ್ ಭಾಷೆ, ಸೆಪ್ಟೆಂಬರ್ ನಲ್ಲಿ ಹಿಂದಿ ಭಾಷೆ, ಅಕ್ಟೋಬರ್ ನಲ್ಲಿ ಕೊಂಕಣಿ ಭಾಷೆ ,ನವೆಂಬರ್ ನಲ್ಲಿ ತುಳು ಭಾಷೆ ಹೀಗೆ ಸ್ಥಳೀಯ ಭಾಷೆಗಳಿಗೂ ಆದ್ಯತೆ ನೀಡಿ ಪಂಚಭಾಷೆಗಳಲ್ಲಿ ಈಗಾಗಲೇ ಪ್ರಸಾರ ಗೊಂಡಿದೆ.
ಶಾಲಾ ಪ್ರತಿ ವಾರ್ತೆಯನ್ನು ವಾರ್ತಾ ವಾಚಕರಾಗಿ ಪರದೆಯ ಮುಂಭಾಗದಲ್ಲಿ ಉತ್ಸಾಹಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ತಕ್ಕಂತೆ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ವಾರ್ತ ನಿರೂಪಣೆ ಮಾಡುತ್ತಿದ್ದರು.ಹಿನ್ನೆಲೆ ದ್ವನಿಯಲ್ಲಿ ಸುಮಾರು 10 ವಿದ್ಯಾರ್ಥಿಗಳು ತಮ್ಮ ಧ್ವನಿಯಲ್ಲಿ ಪ್ರತಿನಿಧಿಸುವಿಕೆಯನ್ನು ತೋರಿಸುತ್ತಿದ್ದರು. ಆರು ಸಂಚಿಕೆಗಳಲ್ಲಿ ಸುಮಾರು 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲಾ ವಾರ್ತೆಗಳಿಗೆ ವಿಷಯ ಸಂಗ್ರಹವನ್ನು ಪಠ್ಯ ಚಟುವಟಿಕೆಯ ಒಂದು ಭಾಗವಾಗಿ ನಿಯೋಜಿತ ಕಾರ್ಯವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು.ವಿದ್ಯಾರ್ಥಿಗಳಿಗೆ ತಾವು ಶೈಕ್ಷಣಿಕ ವಾರ್ತಾ ಪ್ರಸಾರದಲ್ಲಿ ಭಾಗವಹಿಸುವಿಕೆಯ ಹಂಬಲದ ಜೊತೆಗೆ ಶಾಲೆಯ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಪ್ರೇರೇಪಿಸಿ ಪಾಲ್ಗೊಳ್ಳುವಂತೆ ಮಾಡಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ನಿದರ್ಶನ ವಾಗಿದೆ.
ವಿದ್ಯಾರ್ಥಿಗಳಲ್ಲಿ ವಾರ್ತೆಗಳ ವಾಚನ ಮಾಡುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಮನೋಭಾವ ದೊಂದಿಗೆ ಸಿದ್ಧತೆಗಳನ್ನು ನಡೆಸುವ ರೀತಿ ಧನಾತ್ಮಕವಾಗಿತ್ತು. ತಮ್ಮ ಜೊತೆಗೆ ಸಹಪಾಠಿಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿ ಸಿದ್ಧಪಡಿಸುವ ರೀತಿ ರೂಢಿಯಾಗಿ ಬೆಳೆದ ರೀತಿ ಅನನ್ಯ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಆಡಳಿತ ಮತ್ತು ಅಭಿವೃದ್ಧಿ ಹೀಗೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿಯೂ ಶಾಲಾ ವಾರ್ತೆಗಳ ಪ್ರಸಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಇಲಾಖೆ ನಡೆಸುವ ಸಭೆ ಮತ್ತು ಸಮಾಲೋಚನೆಗಳಲ್ಲಿ ಶಾಲಾ ವಾರ್ತೆಗಳು ಪ್ರಸಾರ ಮಾಡುವ ಕಾರ್ಯವೈಖರಿ ಪ್ರಸ್ತುತೀಕರಣ ಲಭ್ಯತೆ ಇತ್ಯಾದಿಗಳ ವಿಷಯಗಳಲ್ಲಿ ಚರ್ಚೆ ನಡೆದು ವಿಷಯ ಸಂಪನ್ನವಾಗುತ್ತಿದ್ದವು.
ಶಾಲೆಯಿಂದ ಆರಂಭವಾದ ವಾರ್ತಾ ಪ್ರಸಾರದ ಬಗ್ಗೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು,ಈ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿಯೂ ಮೆಚ್ಚುಗೆಯ ಬಗೆಗಿನ ಲೇಖನಗಳು ಪ್ರಕಟವಾಗಿದೆ
ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆಯಿಂದ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಸಭಾ ಕಂಪನವನ್ನು ಕಡಿಮೆಗೊಳಿಸಿ ಮುಂದಿನ ದಿನಗಳಲ್ಲಿ ಪತ್ರಿಕೆ ಉದ್ಯಮವನ್ನು ಔದ್ಯೋಗಿಕ ಕ್ಷೇತ್ರವನ್ನಾಗಿ ಆರಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಒಲವು ತೋರಿಸಿರುವುದು ಕಾರ್ಯಕ್ರಮದ ಒಂದು ಧನಾತ್ಮಕ ಅಂಶವಾಗಿದೆ.
ಶಾಲೆ ಹಾಗೂ ಇಲಾಖೆ ನಡೆಸುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಅದರಲ್ಲೂ ನಮ್ಮ ಶಾಲಾ ವಾರ್ತೆಗಳಲ್ಲಿ ನಾವು ವಿಜಯಿಯಾದ ಬಗ್ಗೆ ವಾರ್ತೆಗಳು ಪ್ರಕಟಿಸುತ್ತದೆ ಎಂಬುದನ್ನು ಗಮನಿಸಿ ಸ್ಪರ್ಧೆಗೆ ತಮ್ಮ ಸಿದ್ಧತೆಗಳು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಈ ಬಗ್ಗೆ ಶಿಕ್ಷಕರಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು.
ಸರಕಾರಿ ಶಾಲೆಗಳ ಸಾಲಿನಲ್ಲಿ ತನ್ನ ಪ್ರತಿ ತಿಂಗಳ ಯಶೋಗಾಥೆಯನ್ನು ಪೋಷಕರಿಗೆ ಹಾಗೂ ಸಮುದಾಯಕ್ಕೆ ತಲುಪಿಸಲು ಶಾಲಾ ವಾರ್ತೆಗಳ ಮಾಧ್ಯಮ ಆಯ್ದುಕೊಂಡು ಯಶಸ್ವಿಯಾಗಿದೆ
ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳ ವಿದ್ಯಾರ್ಥಿಗಳು ನಮ್ಮ ವಿದ್ಯಾಸಂಸ್ಥೆಯಲ್ಲಿ ಒಮ್ಮನ್ನಸಿನಿಂದ ಅಧ್ಯಯನ ಮಾಡುತ್ತಿದ್ದಾರೆ. ಇವರ ಸ್ಪಷ್ಟ ಹಾಗೂ ನಿರರ್ಗಳ ಮಾತುಗಾರಿಕೆಯ ಕಲೆಗೆ ಬಲ ತುಂಬುವ ಜೊತೆಗೆ ಮಾತೃಭಾಷೆಗಳಿಗೆ ಮನ್ನಣೆ ನೀಡುವ ಉದ್ದೇಶದಿಂದ ಈಗಾಗಲೇ ಪಂಚ ಭಾಷೆಗಳಾದ ಕನ್ನಡ, ಇಂಗ್ಲಿಷ್, ಹಿಂದಿ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ ನಮ್ಮ ಶಾಲಾ ವಾರ್ತೆಗಳ ಪ್ರಸಾರ ಕಾರ್ಯ ನಡೆದಿದೆ. ಪಂಚ ವರ್ಣದ ಮಣ್ಣಿನ ಈ ನೆಲದಲ್ಲಿ ತಮ್ಮ ಹಾಗೂ ಸಹಪಾಠಿಗಳ ಸಾಧನೆಗಳನ್ನು ನಗುಮೊಗದಿಂದ ಪ್ರಸ್ತುತಪಡಿಸುವ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಯತ್ನ ಪೋಷಕರ ಹಾಗೂ ಸಮುದಾಯದ ಮನ್ನಣೆಗೆ ಪಾತ್ರವಾಗಿದೆ.
ಮಕ್ಕಳ ಪ್ರತಿಭೆಯನ್ನು ವಾರ್ತಾ ಮಾಧ್ಯಮದ ಪರದೆಯಲ್ಲಿ ಮೂಡಿಸುವ ಶ್ರಮ ಸಣ್ಣದಲ್ಲ. ತೆರೆಯ ಹಿನ್ನೆಲೆಯಲ್ಲಿ ದುಡಿಯುವ ಶಾಲೆಯ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಹಾಗೂ ಸವಾಲುಗಳನ್ನು ಸಾಧ್ಯತೆಗಳನ್ನಾಗಿ ಪರಿವರ್ತಿಸುವ ಮನೋಭಾವ ಗಮನಾರ್ಹ. ಪ್ರತಿ ವಿದ್ಯಾರ್ಥಿಯ ಆಯ್ಕೆ, ಅವರಿಂದಲೇ ಸಾಹಿತ್ಯ ರಚನೆಗೆ ತಯಾರಿ, ಮಾತನಾಡುವ ಧಾಟಿ,ವೇಗ ಹಾಗೂ ನಿರರ್ಗಳತೆಗೆ ನೀಡುವ ಪ್ರಾಧಾನ್ಯತೆ, ಪ್ರಸ್ತುತಿಯ ಹಂತದಲ್ಲಿ ಮಕ್ಕಳಿಗೆ ನೀಡುವ ಪ್ರೋತ್ಸಾಹಕ ನುಡಿಗಳು, ಕೇವಲ ಮೊಬೈಲ್ ಬಳಸಿ ಗುಣಮಟ್ಟದ ಶಾಲಾ ವಾರ್ತೆ ಹೊರತರುವಲ್ಲಿ ಶಿಕ್ಷಕರು ಒಂದು ತಂಡವಾಗಿ ದುಡಿಯುತ್ತಾರೆ. ವಾರ್ತೆಗಳ ವಿವರಗಳಿಗೆ ಅಗತ್ಯವಿರುವ ಸಾಲು- ಸಾಲು ಸಾಧನೆಗಳ ಹಿನ್ನೆಲೆಯಲ್ಲೂ ಸದ್ದಿಲ್ಲದೇ ದುಡಿಯುತ್ತಾರೆ. ತಾವು ಪಡೆದ ತಂತ್ರಜ್ಞಾನ ಸಂಬಂಧಿತ ತರಬೇತಿಗಳನ್ನು ಯಶಸ್ವಿಯಾಗಿ ಬಳಸುತ್ತಾ ಇಲಾಖೆಯ ಅಧಿಕಾರಿಗಳ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಅನುಭವಾತ್ಮಕ ಶಿಕ್ಷಣ ಇಂದಿನ ಅಗತ್ಯ. ಜ್ಞಾನದ ಆಧಾರದ ಮೇಲೆ ಕಲಿಕೆ ವಿನೂತನ ಹಾಗೂ ಅತ್ಯಗತ್ಯ ಅನುಭವಗಳನ್ನು ಕಟ್ಟಿಕೊಡುವಷ್ಟು ಗಟ್ಟಿಯಾಗಿರಬೇಕು. ಮಕ್ಕಳು ಇಂದು ಕಲಿತ ನಿರರ್ಗಳ ಮಾತು, ಮಾಧ್ಯಮದ ಪರದೆ ನೀಡುವ ಧೈರ್ಯ ಹಾಗೂ ಹುಮ್ಮಸ್ಸು ಅವರು ಮುಂದೆ ವೇದಿಕೆಗಳನ್ನು ಉತ್ಸಾಹದಿಂದ ಏರುವಂತೆ ಮಾಡಬೇಕು ಎಂಬ ಆಶಯ ಇಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರದ್ದು. ಸದಾ ಹೊಸತನದ ತುಡಿತದಲ್ಲಿರುವ ಈ ಶಿಕ್ಷಕ ವೃಂದದ ಪ್ರಯತ್ನಗಳಿಗೆ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಪೂರ್ವ ಬೆಂಬಲ ದೊರೆತಿರುವುದು ಸಾಧನೆಯ ಹಾದಿಯಲ್ಲಿ ಇನ್ನಷ್ಟು ಮುನ್ನಡೆಯುವ ಬಲ ತುಂಬಿದೆ.
ವಾರ್ತೆಗಳ ಮುಂದಿನ ಸಂಚಿಕೆಗಳಲ್ಲಿ ತಾವು ಇರಬೇಕು ಎಂಬ ಉತ್ಸಾಹದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ, ವಿವಿಧ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಹಾಗೂ ಈಗಾಗಲೇ ಪಾಲ್ಗೊಂಡವರು ಉಳಿದವರಲ್ಲಿ ಸ್ಫೂರ್ತಿ ತುಂಬುತ್ತಿದ್ದಾರೆ. ಕಲಿಕೆ ಸಂತಸದಾಯಕವಾಗಲು ಇನ್ನೇನು ಬೇಕು? ಶಿಕ್ಷಣದ ಗುಣಮಟ್ಟದ ಅಳತೆಗೋಲು ಅದರ ಭವ್ಯ ಕಟ್ಟಡವಲ್ಲ, ಲಕ್ಷಗಟ್ಟಲೆ ಹಣದ ವ್ಯವಹಾರವಲ್ಲ, ಕೇವಲ ಅಂಕಗಳಿಕೆಗಾಗಿ ಮಾಡುವ ಓದು-ಬರಹದ ರಾಶಿಯಲ್ಲ ಬದಲಿಗೆ ಕಲಿತ ವಿದ್ಯೆ ಮಕ್ಕಳ ಮನಸಿನಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಸವಾಲುಗಳನ್ನು ನಗುಮೊಗದಿಂದ ಎದುರಿಸುವ ಶಕ್ತಿಯಾಗಿ ಬೆಳೆದು ಹೊರಹೊಮ್ಮುವಂತೆ ಮಾಡುವುದು. ಮಕ್ಕಳನ್ನು ಈ ಮಾದರಿಯಲ್ಲಿ ಬೆಳೆಸುತ್ತಿರುವ ಸಾರ್ಥಕತೆ ಈ ಶಾಲೆಗಿದೆ.
ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಸಮರ್ಥ ಶಿಕ್ಷಣ ನೀಡುತ್ತಿರುವ ಶಾಲೆಯಾಗಿ ಮನ್ನಣೆ ಗಳಿಸಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಮನೆಯ ಮಾತೃಭಾಷೆಗಳಿಗೆ ವೇದಿಕೆ ಒದಗಿಸುವ ಪ್ರಯತ್ನ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ನುರಿತ ವಾರ್ತಾ ವಾಚಕರಂತೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕೇಳಿದ ಸಮುದಾಯದಲ್ಲಿ ಅಚ್ಚರಿ ಹಾಗೂ ಸಂಭ್ರಮವಿದೆ.
- ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಯ ಮಕ್ಕಳು ವಿವಿಧ ಭಾಷೆಗಳಲ್ಲಿ ಸಮರ್ಥವಾಗಿ ವಾರ್ತೆಗಳನ್ನು ಪ್ರಸ್ತುತ ಪಡಿಸುತ್ತಿರುವುದು ಸಂತಸದಾಯಕ ಕಲಿಕೆಗೆ ಪೂರಕವಾಗಿದೆ. ಶಾಲಾ ಶಿಕ್ಷಕರ ಮಾರ್ಗದರ್ಶನ ಹಾಗೂ ಶ್ರಮದ ಫಲವಾಗಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಸಹ ತನ್ನತ್ತ ಆಕರ್ಷಿಸುವಂತೆ ಈ ಶಾಲೆ ಬೆಳೆಯುತ್ತಿರುವುದು ಅಭಿನಂದನೀಯ
ಜೇಮ್ಸ್ ಕುಟಿನ್ಹ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಗಳೂರು ಉತ್ತರ.
- ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಯಲ್ಲಿ ಐದು ಭಾಷೆಗಳಲ್ಲಿ ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ತಮ್ಮ ಶಾಲೆಯ ವಾರ್ತಾ ವಾಚನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಕ್ಕಳು ಯಾವುದೇ ತಪ್ಪಿಲ್ಲದೇ, ಉಚ್ಚಾರ ದೋಷ ಇಲ್ಲದೇ ಆತ್ಮವಿಶ್ವಾಸದಿಂದ ವಾರ್ತಾ ವಾಚನ ಮಾಡುತ್ತಿರುವುದು ನೋಡಿದರೆ ತುಂಬಾ ಸಂತೋಷ ವಾಗುತ್ತಿದೆ .ಶಾಲೆಯ ಎಲ್ಲ ಮಕ್ಕಳು ತಪ್ಪಿಲ್ಲದೆ ಓದುವಲ್ಲಿ ಪ್ರಯತ್ನಿಸುತ್ತಿರುವುದು ಹಾಗೂ ತಾನೂ ಓದಬೇಕೆಂಬ ಎಲ್ಲ ವಿದ್ಯಾರ್ಥಿಗಳ ಹಂಬಲ ಗುಣಾತ್ಮಕ ಕಲಿಕೆಗೆ ಪೂರಕವಾಗಿದೆ . ಇದಕ್ಕಾಗಿ ಮಾರ್ಗದರ್ಶನ ಮಾಡುತ್ತಿರುವ ಎಲ್ಲ ಶಿಕ್ಷಕ ವೃಂದಕ್ಕೆ ಅಭಿನಂದನೆಗಳು
ಶ್ರೀಮತಿ ರಾಜಲಕ್ಷ್ಮಿ,
ಉಪನಿರ್ದೇಶಕರು ( ಅಭಿವೃದ್ಧಿ) ಹಾಗೂ ಪ್ರಾಂಶುಪಾಲರು, ಡಯಟ್, ಮಂಗಳೂರು.
- ವಿದ್ಯಾರ್ಥಿಗಳನ್ನು ವಾರ್ತಾ ವಾಚನದಲ್ಲಿ ತೊಡಗಿಸಿಕೊಂಡಿರುವ ವಿಧಾನ ನೋಡಿ ಸಂತಸವಾಗಿದೆ. ಅವರ ಸ್ಪಷ್ಟ ಅಭಿವ್ಯಕ್ತಿ ಹಾಗೂ ನುರಿತ ವಾರ್ತಾ ವಾಚಕರಂತೆ ಪ್ರಸ್ತುತ ಪಡಿಸುವ ಸಾಮರ್ಥ್ಯ ಅಭಿನಂದನಾರ್ಹ. ಇದರ ಹಿನ್ನೆಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.
ಶ್ರೀಮತಿ ವಿದ್ಯಾ ಶೆಟ್ಟಿ,
ಸಹಾಯಕ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಜಿಲ್ಲೆ.
-- ಸರಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಸ್ಪಷ್ಟ ಹಾಗೂ ನಿರರ್ಗಳ ವಾರ್ತಾ ವಾಚನ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಿರುವುದನ್ನು ನೋಡುವಾಗ ಸಂತಸವಾಗುತ್ತದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಶಿಕ್ಷಕರ ಪರಿಶ್ರಮ ಅಭಿನಂದನಾರ್ಹ.
ಮೊಹಮ್ಮದ್ ರಿಯಾಜ್, ಅಧ್ಯಕ್ಷರು,
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ (ರಿ.) ಬೆಂಗಳೂರು, ದ.ಕ. ಜಿಲ್ಲಾ ಘಟಕ.