ಸಂಘ ಸಂಸ್ಥೆಗಳು ಸಂಘಟನೆ ಮೂಲಕ ನಡೆಯುವ ಜನೋಪಯೋಗಿ ಕಾರ್ಯಕ್ರಮ ಶ್ಲಾಘನೀಯ - ಎಂ.ದುಗ್ಗಣ್ಣ ಸಾವಂತರು
Friday, January 31, 2025
ಮೂಲ್ಕಿ:ಧಾರ್ಮಿಕ ಚಿಂತನೆ ಮೂಲಕ ಜನರಲ್ಲಿ ಜಾಗೃತಿ ಮೂಡಲು ಸಾಧ್ಯವಿದ್ದು ಸಂಘ ಸಂಸ್ಥೆಗಳು ಸಂಘಟನೆ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಮೂಲ್ಕಿ ಸೀಮೆಯ ಅರಸರು,ಬಪ್ಪನಾಡು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಎಂ ದುಗ್ಗಣ್ಣ ಸಾವಂತರು ಹೇಳಿದರು.ಮೂಲ್ಕಿಯ ಬಪ್ಪನಾಡು ದುರ್ಗಾಪಾರಾಯಣ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ,ವಿವೇಕ ಜಾಗೃತ ಬಳಗ, ಮುಲ್ಕಿ, ಬಿಲ್ಲವ ಸಮಾಜ ಸೇವಾ ಸಂಘ , ಮುಲ್ಕಿ, ಬಂಟರ ಸಂಘ , ಮುಲ್ಕಿ, ದೇವಾಡಿಗ ಸಮಾಜ ಸೇವಾ ಸಂಘ , ಮುಲ್ಕಿ, ಮುಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ, ಮುಲ್ಕಿ, ಬಪ್ಪನಾಡು ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದ, ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಮುಲ್ಕಿ, ಪತಂಜಲಿ ಯೋಗ ಸೇವಾ ಸಮಿತಿ, ಬಪ್ಪನಾಡು,ಹಾಗೂ ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ನ ಸಹಯೋಗದೊಂದಿಗೆ ಶ್ರೀ ಸತ್ಯಸಾಯಿ ಬಾಬಾ ರವರು ಜ. 29 ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿದ ಸವಿ ನೆನಪಿಗೋಸ್ಕರ ಶುಕ್ರವಾರ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಜರಗಿದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ , ಬಪ್ಪನಾಡು ಅಮ್ಮನವರ ಮತ್ತು ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಬಗ್ಗೆ ವಿವರ ಇರುವ ಜಾಲತಾಣ ಲೋಕಾರ್ಪಣೆ , ನಳಿನಾಕ್ಷಿ ಉದಯರಾಜ್ ವಿರಚಿತ "ಶ್ರೀ ಬಪ್ಪನಾಡು ಕ್ಷೇತ್ರದ ಐತಿಹ್ಯದ ಕಥನಕಾವ್ಯ" ಯೂಟ್ಯೂಬ್ ಚ್ಯಾನಲ್ ಬಿಡುಗಡೆ, ಜೇಷ್ಠ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಳಿನಾಕ್ಷಿ ಉದಯ ರಾಜ್, ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಜೀವಿ, ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವಸಂತಿ, ಶಿಕ್ಷಣ ಕ್ಷೇತ್ರದಲ್ಲಿ 39 ವರ್ಷ ಸೇವೆ ಸಲ್ಲಿಸಿದ ಜಯಂತಿ, ಸಾಮಾಜಿಕ ಕಾರ್ಯಕರ್ತೆ ಸರೋಜಿನಿ ಸುವರ್ಣ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ತಬಲಾ ವಾದಕ ಮಂಜಪ್ಪ ಸುವರ್ಣ ಅಂಬಲಪಾಡಿಯವರನ್ನು ಸನ್ಮಾನಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು,ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು,ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಲೋಕ ಕಲ್ಯಾಣಾರ್ಥವಾಗಿ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.ಅದಮಾರು ರಾಮಕೃಷ್ಣ ಭಟ್ ಸ್ವಾಗತಿಸಿದರು,ನಳಿನಾಕ್ಷಿ ಉದಯರಾಜ್ ವಂದಿಸಿ,ನಿರೂಪಿಸಿದರು.ಕಣ್ಣಿನ ಶಿಬಿರದಲ್ಲಿ ಸುಮಾರು 150 ಮಂದಿ ಭಾಗವಹಿಸಿದ್ದು 100 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.