ಪೋಷಕರು ಮಕ್ಕಳ ಜೊತೆ ಸ್ನೇಹಿತರಂತೆ ಬೆರೆಯಬೇಕು - ಇರ್ಷಾದ್ ಸಅದಿ
Saturday, January 11, 2025
ಕಿನ್ನಿಗೋಳಿ: ಪೋಷಕರು ಮಕ್ಕಳ ಜತೆಗೆ ಕಠೋರವಾಗಿ ವರ್ತಿಸದೇ, ಸ್ನೇಹಿತರಂತೆ ಬೆರೆಯಬೇಕು. ಹಾಗೆ ಇದ್ದಲ್ಲಿ ಮಕ್ಕಳು ಯಾವ ಹಂತದಲ್ಲೂ ದಾರಿ ತಪ್ಪಲಾರರು. ಪ್ರವಾದಿ ಮುಹಮ್ಮದ್ (ಸ.ಅ.) ಅವರು ಈ ವಿಚಾರದಲ್ಲಿ ನಮಗೆ ಮಾದರಿಯಾಗಿದ್ದಾರೆ ಎಂದು ಕಾಪು ಜಾಮಿಯಾ ಮಸ್ಜಿದ್ ಖತೀಬರು ಮೊಹಮ್ಮದ್ ಇರ್ಷಾದ್ ಸಅದಿ ಹೇಳಿದರು.
ಮುಹಮ್ಮದೀಯ ಜುಮಾ ಮಸೀದಿ ಹಾಗೂ ಮೊಹ್ಯಿಯುದ್ದೀನ್ ಯಂಗ್‌ಮೆನ್ಸ್ ಎಸೋಸಿಯೇಶನ್ ಪುನರೂರು ಇದರ 18ನೇ ವಾರ್ಷಿಕ ಜಲಾಲಿಯಾ ರಾತೀಬ್ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಯುವಕರು ದಾರಿ ತಪ್ಪುತ್ತಿರುವ ವರದಿಗಳು ಪ್ರತಿದಿನ ಕೇಳುತ್ತಿದ್ದೇವೆ. ಮಾದಕ ವ್ಯಸನದ ಹಿಂದೆ ಬಿದ್ದಿರುವ ಯುವ ಜನಾಂಗವನ್ನು ಸರಿದಾರಿಗೆ ತರುವುದಾದರೂ ಯಾರು ಅನ್ನೋ ಪ್ರಶ್ನೆ ಉದ್ಭವಿಸುತ್ತಿದೆ. ದುಶ್ಚಟಗಳ ವಿರುದ್ಧ ಉಪನ್ಯಾಸ ನೀಡುವಂತೆ ಅದೆಷ್ಟೋ ಪೋಷಕರು ಧಾರ್ಮಿಕ ವಿದ್ವಾಂಸರನ್ನು ಕೇಳುತ್ತಿದ್ದಾರೆ. ಇದೆಲ್ಲಕ್ಕೂ ಪರಿಹಾರವಾಗಿ ನಾವು ಮಕ್ಕಳನ್ನು ಎಳವೆಯಲ್ಲೇ ಸದ್ವಿಚಾರದ ಕಡೆಗೆ ಕರೆದೊಯ್ಯಬೇಕಿದೆ. ಇದರಿಂದಷ್ಟೇ ಬದಲಾವಣೆ ಸಾಧ್ಯ ಎಂದರು.
ಅಹಂಕಾರ ಪ್ರದರ್ಶಿಸದಂತೆ, ಹಿರಿಯರನ್ನು ಗೌರವಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಜೀವನೋತ್ಸಾಹವನ್ನು ಧಾರ್ಮಿಕ ಚೌಕಟ್ಟಿನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಜೆಎಂ ಪುನರೂರು ಅಧ್ಯಕ್ಷ ಮೊಹಮ್ಮದ್ ಹಾಜಿ ವಹಿಸಿದ್ದರು. ಧಾರ್ಮಿಕ ವಿದ್ವಾಂಸ ಶೈಖುನಾ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಎಂಜೆಎಂ ಪುನರೂರು ಪ್ರಧಾನ ಕಾರ್ಯದರ್ಶಿ ಪಿ.ಎಸ್. ಹಸನ್ ರಶೀದ್, ಗೌರವಾಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ಪಿ.ಎಸ್. ರಶೀದ್ ಲತೀಫ್, ಎಂವೈಎ ಅಧ್ಯಕ್ಷ ಪಿ.ಎಸ್. ಅಫ್ತಾಬ್ ಅಹ್ಮದ್ ಮಿಲನ್, ಅಹ್ಮದ್ ಹಾಜಿ ಕಲ್ಕರೆ ಉಪಸ್ಥಿತರಿದ್ದರು. ಮುಅಲ್ಲಿಂ ಮೌಲಾನ ಮೊಹಮ್ಮದ್ ಸಜ್ಜಾದ್ ಆಲಂ ನೂರಿ ಕಿರಾಅತ್ ಪಠಿಸಿದರು. ಖತೀಬರು ಮೊಹಮ್ಮದ್ ಅಶ್ರಫ್ ಸಅದಿ ಸ್ವಾಗತಿಸಿ, ನಿರೂಪಿಸಿದರು.